ವರದಿ: ಬಲರಾಮ್ ವಿ. 'ಪಬ್ಲಿಕ್ ನೆಕ್ಸ್ಟ್' ಕೆ.ಆರ್. ಪುರ
ಬೆಂಗಳೂರು: ಹೌದು, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುಗೆ ಭೂ ಉರುಳು ಸುತ್ತಿಕೊಂಡಿದೆ. 18 ವರ್ಷಗಳ ಹಳೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಪಕ್ಷದ ನಾಯಕರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಬುದ್ಧಿ ಕಲಿಸಲು ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ ಎನ್ನಲಾಗಿದೆ. ಆದ್ರೆ, ಬೈರತಿ ಬಸವರಾಜು ಭೂ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ... "ರಾಮಮೂರ್ತಿನಗರ ವಾರ್ಡ್ ನ ಎನ್ ಆರ್ ಐ ಬಡಾವಣೆಯಲ್ಲಿ 35 ಎಕರೆ ಖಾಸಗಿ ಭೂಮಿಯಾಗಿದೆ. ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ಯಾವುದೇ ತಪ್ಪುಮಾಡಿಲ್ಲ, ರಾಜೀನಾಮೆ ಪ್ರಶ್ನೆಯೇ ಇಲ್ಲ.
2013ರಲ್ಲೇ ಎಕರೆಗೆ 18 ಲಕ್ಷ ನೀಡಿ ಖರೀದಿ ಮಾಡಿದ್ದೇನೆ. ಈ ವಿಚಾರಣೆ ಜಮೀನು ಮಾಲೀಕರ ಸಮ್ಮುಖ ಮತ್ತು ಕಲ್ಲೆರೆ ನಿವಾಸಿಗಳ ಸಮ್ಮುಖದಲ್ಲೇ ನಡೆಯಲಿ, ಆಗ ಸತ್ಯಾಂಶ ತಿಳಿಯಲಿದೆ. ನಾನು ನ್ಯಾಯಾಲಯಕ್ಕೆ ತಲೆ ಬಾಗುತ್ತೇನೆ, ಯಾರಿಗೂ ಮೋಸ ಮಾಡಿಲ್ಲ" ಎಂದು ಸಮರ್ಥಿಸಿಕೊಂಡರು.
ಇನ್ನು, ಬೈರತಿ ಬಸವರಾಜು ಜಮೀನನ್ನು ಖರೀದಿಸಿರೋದು ದಿ.ಆದೂರು ಅಣ್ಣಯ್ಯಪ್ಪರವರ ಅವಿಭಕ್ತ ಕುಟುಂಬದಿಂದಾಗಿದೆ. ಐದು ಜನ ಸಹೋದರರು ಸೇರಿಕೊಂಡು ಬೈರತಿಯವರಿಗೆ ಜಿಪಿಎ ಮಾಡಿಕೊಟ್ಟಿದ್ದು, ಆ ಮೂಲಕ ಜಮೀನು ಮಾರಾಟ ಮಾಡಿದ್ದಾರೆ. ಇದನ್ನು ಅಣ್ಣಯ್ಯಪ್ಪ ಅವರ ಕುಟುಂಬ ಸುದ್ದಿಗೋಷ್ಠಿ ನಡೆಸಿ "ನಮಗೆ ಬೈರತಿ ಬಸವರಾಜು ಯಾವುದೇ ಮೋಸ ಮಾಡಿಲ್ಲ. ಅವರ ಸುಮ್ಮನೆ ಆರೋಪ ಮಾಡಲಾಗುತ್ತಿದೆ" ಎಂದಿದ್ದಾರೆ.
ಸದ್ಯ ಬೈರತಿ ಬಸವರಾಜು ಪರ ವಿರೋಧ ಮಾತು ರಾಜಕೀಯ ವಲಯದಲ್ಲಿ ಜೋರಾಗಿಯೇ ಕೇಳುತ್ತಿದೆ. ಆದ್ರೆ, ಬೈರತಿ ಬಸವರಾಜು ಪರ ಜಮೀನು ಮಾಲೀಕರ ಕುಟುಂಬದ 60ಕ್ಕೂ ಹೆಚ್ಚು ಸದಸ್ಯರು ನಿಂತಿದ್ದಾರೆ. ರಾಜಕೀಯದಲ್ಲಿ ಯಾವಾಗ ಏನಾಗುತ್ತೋ ಕಾದು ನೋಡಬೇಕಿದೆ.
Kshetra Samachara
18/12/2021 10:22 pm