ಬೆಂಗಳೂರು: ಭೂವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ಬಿಎಂಟಿಸಿ ಚಾಲಕನ ಮೇಲೆಯೇ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿ, ಒಪ್ಪದಿದ್ದಾಗ ಆತನ ಕೆನ್ನೆಗೆ ಬಾರಿಸಿರುವ ಆರೊಪಕ್ಕೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರು ತುತ್ತಾಗಿದ್ದಾರೆ.
ಅಂದ್ಹಾಗೆ ಸಾಮಾಜಿಕ ನ್ಯಾಯದ ಅಪೇಕ್ಷೆಯಲ್ಲಿ ಠಾಣೆಗೆ ದೂರನ್ನಿತ್ತ ಪರಿಣಾಮ ಕೆನ್ನೆಗೆ ಬಾರಿಸಿಕೊಂಡಾತ ಬಿಎಂಟಿಸಿ ಚಾಲಕ ವೆಂಕಟೇಶ್, ಆತನ ಕೆನ್ನೆಗೆ ಹಿಂದು ಮುಂದೆ ನೋಡದೆ ಬಾರಿಸಿ ಕಳುಹಿಸಿರುವ ಸಬ್ ಇನ್‌ಸ್ಪೆಕ್ಟರ್ ಹೆಸರು ಮುರುಳಿ. ಈ ಮಹಾನುಭಾವ ರಾಮನಗರ ಪುರ ಆರಕ್ಷಕ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅಂತೆ.
ರಾಮನಗರ ಟೌನ್‌ನ ಸಿಂಗ್ರಾಬೋವಿ ದೊಡ್ಡಿಯಲ್ಲಿ ನಡೆದಿದೆ ಎನ್ನಲಾಗಿರುವ ಈ ಘಟನೆ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದಿದೆ. ಸ್ಥಳೀಯ ನಿವಾಸಿ ವೆಂಕಟೇಶ್ ಅರ್ಧ ಗುಂಟೆ ಭೂಮಿಯನ್ನು 2017ರಲ್ಲಿ 3 ಲಕ್ಷಕ್ಕೆ ಖರೀದಿ ಮಾಡಿ ಅಲ್ಲಿ ಮನೆ ನಿರ್ಮಿಸಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಅದಕ್ಕೆ ಹೊಂದಿಕೊಂಡಂತೆ ವಾಸವಾಗಿರುವ ಧನಂಜಯ, ಶ್ರೀನಿವಾಸ್ ಹಾಗು ಅವರ ಕುಟುಂಬ ವೆಂಕಟೇಶ್ ಜತೆ ರಸ್ತೆಗೆ ಜಾಗ ಬಿಡುವ ವಿಚಾರದಲ್ಲಿ ಮೊದಲಿಂದಲೂ ಗಲಾಟೆ ಮಾಡುತ್ತಿತ್ತು ಎನ್ನಲಾಗಿದೆ.
ಆದ್ರೆ ವೆಂಕಟೇಶ್ ಇದಕ್ಕೆ ಒಪ್ಪದಿದ್ದಾಗ ಆತನ ಮೇಲೆ ಹಲ್ಲೆ ಮಾಡುವಂಥ ಕೆಲಸವನ್ನೂ ಮಾಡಿದ್ದರಂತೆ. ಈ ಸಂಬಂಧ ವೆಂಕಟೇಶ್ ಕನಿಷ್ಠ 6-7 ಬಾರಿ ಇದೇ ಠಾಣೆಗೆ ದೂರನ್ನ ಕೂಡ ನೀಡಿದ್ರಂತೆ. ದುರಂತ ಎಂದ್ರೆ ಮೇಲ್ಕಂಡ ಪ್ರಕರಣದಲ್ಲಿ ಪೊಲೀಸರು ಧನಂಜಯ್ ಪರವಾಗೇ ಕೆಲಸ ಮಾಡಿದ್ರು ಎನ್ನುವುದು ಸ್ಥಳೀಯರ ಆರೋಪ ಕೂಡ. ಇದೇ ವಿಚಾರದಲ್ಲಿ ನಿನ್ನೆ ಇದ್ದಕ್ಕಿದ್ದಂತೆ ವೆಂಕಟೇಶ್ ಜಾಗದಲ್ಲಿದ್ದ ಪೈಪ್‌ನಲ್ಲಿ ಒಡೆದಾಕಿದ್ದಾರೆ. ಇದು ನಮ್ಮ ಜಮೀನು. ಇಲ್ಲೇಕೆ ನಿನ್ನ ವಸ್ತುಗಳನ್ನು ಹಾಕಿದ್ದೀಯ ಎಂದು ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದಾರೆ. ವೆಂಕಟೇಶ್ ಕೂಡ ಖಡಕ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದಾಗ ಅಲ್ಲಿ ನಡೆದ ಒಟ್ಟಾರೆ ಘಟನೆಯನ್ನು ಚಿತ್ರಿಕರಿಸಿ ಮೊಬೈಲ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಿ, ದೂರು ಕೂಡ ನೀಡಿದ್ದಾರೆ.
Kshetra Samachara
14/06/2022 04:06 pm