ದೊಡ್ಡಬಳ್ಳಾಪುರ : ತಾಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತೋಟಗಾರಿಕಾ ಬೆಳೆಗಳಾದ ಪಡುವಲಕಾಯಿ, ಟೊಮಾಟೊ ಬೆಳೆಗಳು ನೆಲಕಚ್ಚಿವೆ, ಫಸಲಿಗೆ ಬಂದಿದ್ದ ಬೆಳೆಗಳನ್ನ ಕಳೆದುಕೊಂಡ ರೈತರು ಆರ್ಥಿಕ ನಷ್ಟದಿಂದ ಕಣ್ಣೀರು ಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಶಿವಪುರದ ರೈತ ಶ್ರೀನಿವಾಸ್ ಸೊಣ್ಣಪ್ಪನಹಳ್ಳಿ ಗ್ರಾಮದಲ್ಲಿ ಲೀಸ್ ಗೆ ಜಮೀನು ಪಡೆದು ಹೈಬ್ರಿಡ್ ಪಡವಲಕಾಯಿ ಮತ್ತು ಟೊಮಾಟೊ ಬೆಳೆದಿದ್ದರು. ಕೊಯ್ಲುಗೆ ಬಂದಿದ್ದ ಟೊಮಾಟೊ ಬೆಳೆಯಿಂದ ಒಂದು ಫಸಲು ಪಡೆದಿದ್ದರು. ಚಪ್ಪರ ನಿರ್ಮಾಣ ಮಾಡಿ ಹೈಬ್ರಿಡ್ ಪಡುವಲಕಾಯಿ ಬೆಳೆದಿದ್ದರು, ಪಡುವಲಕಾಯಿ ಸಹ ಕೊಯ್ಲುಗೆ ಬಂದಿದ್ದು, ರೈತ ಲಾಭದ ನಿರೀಕ್ಷೆಯಲ್ಲಿದ್ದ, ಆದರೆ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಪಡುವಲಕಾಯಿ ಚಪ್ಪರ ಮುರಿದು ಬಿದ್ದು ಬೆಳೆ ಮಣ್ಣುಪಾಲಾಗಿದೆ.
ಎರಡು ಬೆಳೆಗೆ ಎರಡೂವರೆ ಲಕ್ಷ ಸಾಲ ಮಾಡಿ ಬೆಳೆ ಮಾಡಲಾಗಿತ್ತು. ಆದರೆ ಬಿರುಗಾಳಿ ಮಳೆಯಿಂದ ಹಾಕಿದ ಬಂಡವಾಳ ಸಹ ಕೈ ಸೇರಿಲ್ಲ, ಸದ್ಯ ಸಾಲದ ಹೊರೆಗೆ ರೈತ ಕಂಗಲಾಗಿದ್ದಾನೆ.
ಲಕ್ಷ್ಮೀದೇವಿಪುರದ ನಾರಾಯಣಗೌಡ ಈಗಾಗಲೇ ದ್ರಾಕ್ಷಿ ಬೆಳೆದು 5 ಲಕ್ಷ ಹಣ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸದ್ಯ ಹೈಬ್ರಿಡ್ ಪಡುವಲಕಾಯಿ ನೆಲಕಚ್ಚಿದೆ, ಒಂದು ಎಕರೆ 10 ಗುಂಟೆ ಜಮೀನಿನಲ್ಲಿ ಚಪ್ಪರ ನಿರ್ಮಾಣ ಮಾಡಿ 2 ಲಕ್ಷ ಖರ್ಚು ಮಾಡಿ ಪಡುವಲಕಾಯಿ ಬೆಳೆದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನು ರಾಜಘಟ್ಟ ಗ್ರಾಮದಲ್ಲಿ ವಾಟರ್ ಮ್ಯಾನ್ ಶ್ರೀನಿವಾಸ್ ರವರು ಚರಂಡಿಗೆ ಮಣ್ಣು ಸುರಿದು ಬಂದ್ ಮಾಡಿದ್ರು, ನಿನ್ನೆ ರಾತ್ರಿ ಸುರಿದ ಮಳೆಗೆ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ರಾಮಾಂಜಿನಪ್ಪನವರ ಮನೆಗೆ ನೀರು ನುಗ್ಗಿದೆ, ಇಡೀ ರಾತ್ರಿ ನಿದ್ದೆಗೆಟ್ಟು ಮನೆಯಿಂದ ನೀರು ಹೊರಹಾಕಲು ಹರಸಹಾಸ ಪಟ್ಟರು.
Kshetra Samachara
31/07/2022 08:09 pm