ಬೆಂಗಳೂರು: ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಬುಧವಾರ ನೀಡಲಾಯಿತು. ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಮತ್ತು ಆಯುಕ್ತರಾದ ರಾಜೇಶ್ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬುಧವಾರ ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ನಲ್ಲಿರು ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ನಂತರ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕ ಅವರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ನನಗೆ ಬಿಡಿಎ ವತಿಯಿಂದ ನಿವೇಶನವನ್ನು ನೀಡಿರುವುದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಲ್ಲಿ ಪರಿಸರ ಕಾಳಜಿ ಮೂಡುವಂತೆ ಮಾಡಬೇಕೆಂದು ಹಾರೈಸಿದರು. ಇದೇ ವೇಳೆ ಮಾತನಾಡಿದ ವಿಶ್ವನಾಥ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆ ಮೇರೆಗೆ ಬಿಡಿಎ ವತಿಯಿಂದ ನಮ್ಮೆಲ್ಲರ ಮಾರ್ಗದರ್ಶಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರಿಗೆ ನಿವೇಶನ ನೀಡಿರುವುದು ಸಂತೋಷ ತಂದಿದೆ ಎಂದರು.
Kshetra Samachara
22/06/2022 08:39 pm