ಸಾಕಪ್ಪ ಸಾಕು, ಈ ಟ್ರಾಫಿಕ್ ಜಾಮ್, ಜನಜಂಗುಳಿ ಕಿರಿಕಿರಿ ಅಂತ ಬೆಂಗಳೂರಿನ ಬಗ್ಗೆ ಮೂಗು ಮುರಿಯೋರೆ ಹೆಚ್ಚು. ಇಂತಹ ಪರಿಸ್ಥಿತಿಲಿ ಸಂಪೂರ್ಣ ಹಳ್ಳಿಸೊಗಡಿನ ಈ ಪ್ರದೇಶ ನಮ್ಮನ್ನ 20-30 ವರ್ಷ ಹಿಂದಕ್ಕೆ ಕರೆದೊಯ್ತದೆ. ಪ್ರತಿಯೊಬ್ಬರೂ ಮತ್ತೆ ನಮ್ಮ ಬಾಲ್ಯಕ್ಕೆ ಹೋಗಿ, ಆಟ ಆಡಿ ನಲಿದು ಕುಣಿದು ಕುಪ್ಪಳಿಸುವಂತಹ ಸನ್ನಿವೇಶ ಕಣ್ಣೆದುರಿಗೆ ಬರ್ತದೆ. ಆಗಿದ್ರೆ ಯಾವುದು ಆ ಪ್ರದೇಶ ಅನ್ನೋ ಕುತೂಹಲವೇ!?
ಇದುದೇ ಮಾದರಿ ಪಾರಂಪರಿಕ ಗ್ರಾಮ. ಬೆಂಗಳೂರು ಉತ್ತರ ಯಲಹಂಕ ಹತ್ತಿರದ ಜಕ್ಕೂರು ಬಳಿ ರಾಚೇನಹಳ್ಳಿ ಕೆರೆಗೆ ಹೊಂದಿಕೊಂಡಿದೆ ಮಾದರಿ ಪಾರಂಪರಿಕ ಗ್ರಾಮ. ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ & ಅಭಿವೃದ್ಧಿ ಸಂಸ್ಥೆನ ಮಾಜಿ CM ಯಡಿಯೂರಪ್ಪ 13-11-2020ರಲ್ಲಿ ಲೋಕಾರ್ಪಣೆ ಮಾಡಿದ್ದರು. ಈ ಕ್ಯಾಂಪಸ್ಸಿನ ಕಲಾಗ್ರಾಮವನ್ನು ಸರ್ಕಾರ ಕೋಟ್ಯಾಂತರ ರೂ. ವೆಚ್ಚದಲ್ಲಿ, ಕಾಂಕ್ರೀಟಿನಲ್ಲಿ ಹಳ್ಳಿ ಸೊಗಡಿನ ನಿಜ ಚಿತ್ರಣ ಅಭಿವೃದ್ಧಿ ಪಡಿಸಿದೆ.
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗೊಟಗೋಡೆ ಗ್ರಾಮದಲ್ಲಿ ಉತ್ಸವ್ ರಾಕ್ ಗಾರ್ಡನ್ ನ ಕಲಾವಿದ ಸೊಲಬಕ್ಕನವರ್ ನಿರ್ಮಿಸಿದ್ದಾರೆ. ಈ ಕಲಾವಿದ ನಿಜ ಗ್ರಾಮವೇ ನಾಚುವಂತೆ ಮರುಸೃಷ್ಟಿಸಿರೋ ಈ ಗೊಟಗೋಡೆ ಇರೋದು ಹುಬ್ಬಳ್ಳಿ ಸಮೀಪದಲ್ಲೇ. ಇದೇ ಉತ್ಸವ್ ರಾಕ್ ಗಾರ್ಡನ್ಸ್ ಸೃಷ್ಟಿಕರ್ತ ಸೊಲಬಕ್ಕನವರ್ ಕೈಚಳಕದಲ್ಲಿ ಬೆಂಗಳೂರಿನ ಜಕ್ಕೂರು ಬಳಿ ಮಾದರಿ ಕಲಾಗ್ರಾಮ ಸೃಷ್ಟಿಯಾಗಿದೆ.
ಕೊರೊನಾ ಸಂಕಷ್ಟ ವೇಳೆ ಪ್ರಾರಂಭವಾದ್ದರಿಂದ ಇನ್ನೂ ಕಲಾಗ್ರಾಮದ ಬಗ್ಗೆ ಬೆಂಗಳೂರಿಗೆ ಹೆಚ್ಚಾಗಿ ಗೊತ್ತಿಲ್ಲ. ಗೊತ್ತಾದ್ರೆ ವೀಕೆಂಡ್ ನಲ್ಲಿ ಕಾಲಿಡಲೂ ಆಗದಷ್ಟು ರಷ್ ಆಗ್ತದೆ. ಗ್ರಾಮೀಣ ಭಾಗದ ಹಳ್ಳಿಮನೆ, ಹೆಂಗಸರು, ಗಂಡಸರು, ನಾಯಿ, ಕೋಳಿ, ಬೆಕ್ಕು, ಹಸು, ಎಮ್ಮೆ ಆಟ, ಊಟ, ಓಟ ಜೊತೆಗೆ ಪಾಠದ ಸಮಗ್ರ ಚಿತ್ರಣವನ್ನು ಸಿಮೆಂಟ್ ಚಿತ್ರಗಳ ಮೂಲಕ ಕಟ್ಟಿ ಕೊಡಲಾಗಿದೆ.
ಈ ಮೊದಲು ಸರ್ಕಾರವೇ ಕಲಾಗ್ರಾಮವನ್ನು ನೋಡಿಕೊಳ್ತಿತ್ತು. ಆಗ ಹತ್ತು ವರ್ಷಕ್ಕಿಂತ ಚಿಕ್ಕವರಿಗೆ ಪ್ರವೇಶ ಉಚಿತ. ಹತ್ತು ವರ್ಷ ಮೇಲ್ಪಟ್ಟವರಿಗೆ 50 ರೂ., ಹಿರಿಯರಿಗೆ 100 ರೂ. ಟಿಕೆಟ್ ಇತ್ತು. ಇದೀಗ ರಂಗೋಲಿ ಗಾರ್ಡನ್ಸ್ ಸಂಸ್ಥೆ ನಿರ್ವಹಣೆ ಮಾಡ್ತಿದೆ. ಈಗ ಮಕ್ಕಳಿಗೆ 80ರಿಂದ 100 ರೂ. ಟಿಕೆಟ್. ವಯಸ್ಕರಿಗೆ ಶನಿವಾರ & ಭಾನುವಾರ 200 ರೂ. ಉಳಿದ ದಿನ 150. ಟಿಕೆಟ್ ಬೆಲೆ ಜಾಸ್ತಿಯಾದ್ದರಿಂದ ಸಾಮಾನ್ಯ ಜನ ಬರುವುದು ಸ್ವಲ್ಪ ಕಷ್ಟವೇ. ಆದರೆ ಹಳ್ಳಿತನಕ್ಕೆ ಬೆಲೆ ಕಟ್ಟಲಾಗದು. ಹೊಲ ಗದ್ದೆ, ಬೇಸಾಯ, ದನ, ಕರು, ಕೊಟ್ಟಿಗೆ ಎಲ್ಲವೂ ನಿಜವೇ ನಾಚುವಷ್ಟರ ಮಟ್ಟಿಗಿದೆ.
ಗ್ರಾಮೀಣ ಭಾಗದ ಅಂಗಡಿ, ನಾಟಿ ಚಿಕಿತ್ಸೆ, ತೊಟ್ಟಿಮನೆ, ತಾಯಿ ಮಕ್ಕಳಿಗೆ ಸ್ನಾನ ಮಾಡಿಸುವ, ಮಕ್ಕಳು ಆಟ ಆಡುವ, ಶಾಲೆಲಿ ಪಾಠ ಕೇಳುವ, ಬಡಗಿ, ಚಮ್ಮಾರ, ಗಾಣಿಗ, ಅಕ್ಕಸಾಲಿಗ, ಡೋಬಿ, ನೇಕಾರ, ಕಲ್ಲುಕುಟುಗ, ಆಚಾರಿ, ಅಕ್ಕಸಾಲಿಗ ಹೀಗೆ ಸಂಪೂರ್ಣ ಗ್ರಾಮೀಣ ಚಿತ್ರಣವನ್ನು ಇಲ್ಲಿದೆ.
ರೈತ ಹೊಲ ಉಳುವ, ಬಿತ್ತನೆ ಬೀಜ ಹಾಕುವ, ಹುಳ ತಿನ್ನಲು ಬರುವ ಪಕ್ಷಿ, ಕೊಕ್ಕರೆ ಎಲ್ಲವೂ ಚಂದವೋ ಚಂದ. ಇನ್ನು ಹಸುಗಳ ವ್ಯಾಪಾರದ ಸಂತೆ, ತರಕಾರಿ ಸಂತೆ, ಸಂತೆಯ ಅಂಗಡಿ ಮನಮುಟ್ಟುವಂತಿದೆ. ಉತ್ತರ ಕರ್ನಾಟಕ ಭಾಗದಲ್ಲಿನ ಕುಸ್ತಿ ನೋಡಲು ಕರ್ಣಾನಂದ. ಹಾಗೆಯೇ ಜಾನಪದ ಕಲಾಪ್ರಕಾರ, ಜಾನಪದ ಥಿಯೇಟರ್, ವೇದಿಕೆ, ರಂಗಮಂಟಪ ಹೀಗೆ ವರ್ಣನಾತೀತ.
ಭಾರತ ಹಳ್ಳಿಗಳ ದೇಶ. ಪ್ಯಾಟೆ ಎಷ್ಟೇ ಚಂದ ಅನಿಸಿದರೂ ಎಲ್ಲವೂ ದುಬಾರಿ. ಪ್ರೀತಿಯೂ ಸಹ. ಇಂತಹ ನಗರೀಕರಣದ ನಡುವೆಯೂ ಕಾಂಕ್ರೀಟ್ ಕಾಡಲ್ಲಿ ಹಳ್ಳಿ ಸೊಬಗನ್ನ ಹಳ್ಳಿಯೇ ನಾಚುವಷ್ಟರ ಮಟ್ಟಿಗೆ ಕಲಾವಿದನ ಕುಸುರಿ ಕೆಲಸ, ಸೂಕ್ಷ್ಮ ಸಂವೇದನೆ ಎದ್ದು ಕಾಣ್ತದೆ. ಅನವಶ್ಯಕವಾಗಿ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡ್ತದೆ. ಆದರೆ, ಕಲಾಗ್ರಾಮಕ್ಕಾಗಿ ಮಾಡಿರುವ ಖರ್ಚು ಸಾರ್ಥಕವಾದದ್ದು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್
PublicNext
01/08/2022 06:17 pm