ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ಸಲ್ಲಿಸಿದ 18ನೇ ವರದಿಯನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್ ಮತ್ತೆ ಡಾ ಶಿವರಾಮ ಕಾರಂತ ಬಡಾವಣೆಯ 355 ಕಟ್ಟಡಗಳನ್ನು ಸಕ್ರಮಗೊಳಿಸಿದ್ದು, ಈವರೆಗೆ ಒಟ್ಟು 4,396 ಕಟ್ಟಡಗಳು ಸಕ್ರಮಗೊಂಡಂತಾಗಿದೆ.
ಈವರೆಗೂ ಉದ್ದೇಶಿತ ಬಡಾವಣೆಯ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 7161 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬದಲಿ ನಿವೇಶನ ನೀಡುವುದಕ್ಕೆ 2248 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಡಾ . ಶಿವರಾಂ ಕಾರಂತ ಬಡಾವಣೆಯಲ್ಲಿ ಕಟ್ಟಡಗಳನ್ನು ‘2014ಕ್ಕೆ ಮುನ್ನ 2014 ಮತ್ತು 2018 ರ ನಡುವೆ ಹಾಗೂ 2018ರ ನಂತರ ನಿರ್ಮಾಣ ಎಂದು ನ್ಯಾ.ಎ.ವಿ.ಚಂದ್ರಶೇಖರ್ ಸಮಿತಿ ವರ್ಗೀಕರಣ ಮಾಡುವ ಕಾರ್ಯವನ್ನು ಮುಂದುವರಿಸಿದೆ.
2018ಕ್ಕಿಂತ ಮುಂಚಿತವಾಗಿ ಉದ್ದೇಶಿತ ಬಡಾವಣೆ ವ್ಯಾಪ್ತಿಯಲ್ಲಿ ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆದು ಕಟ್ಟಿದ ಕಟ್ಟಡಗಳ ಮಾಲೀಕರು ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ಈವರೆಗೆ 18 ವರದಿಗಳನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಮಿತಿಯು ಸ್ಥಳೀಯರಿಂದ ಒಟ್ಟು 7 ಸಾವಿರ ಕಟ್ಟಡಗಳನ್ನು ಸಕ್ರಮಗೊಳಿಸಲು ಕೋರಿ ಅರ್ಜಿಗಳನ್ನು ಸ್ವೀಕರಿಸಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಸಂಪೂರ್ಣ ದಾಖಲೆಗಳನ್ನು ಸಲ್ಲಿಸಿದವರಿಗೆ ಹಂತ-ಹಂತವಾಗಿ ಸುಪ್ರೀಂ ಕೋರ್ಚ್‌ಗೆ ಸಲ್ಲಿಸಿ ಆದೇಶ ಪಡೆಯಲಾಗುತ್ತಿದೆ. ಕಟ್ಟಡಗಳ ದಾಖಲೆ ಪರಿಶೀಲನೆ ಸೇರಿದಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು ಹಾಗೂ ನ್ಯಾಯಾಲಯ ಸಕ್ರಮಗೊಳಿಸಿ ಆದೇಶಿಸಿದ ಕಟ್ಟಡಗಳಿಗೆ ಸಕ್ರಮ ಪ್ರಮಾಣಪತ್ರ ಸಲ್ಲಿಸುವ ಕಾರ್ಯ ಸಹ ನಿರಂತರವಾಗಿ ಚಾಲನೆಯಲ್ಲಿ ಇರಲಿದೆ ಎಂದು ನ್ಯಾ.ಎ.ವಿ.ಚಂದ್ರಶೇಖರ ಸಮಿತಿ ತಿಳಿಸಿದೆ.
Kshetra Samachara
29/07/2022 10:39 pm