ಬೆಂಗಳೂರು: ಕೇವಲ ದಾಖಲೆ ಪರಿಶೀಲನೆಗೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ನಿಲ್ಲಿಸಬಾರದು. ಕೇವಲ ಟ್ರಾಫಿಕ್ ರೂಲ್ಸ್‌ನ್ನು ಉಲ್ಲಂಘಿಸಿದವರ ವಾಹನಗಳನ್ನು ಮಾತ್ರ ನಿಲ್ಲಿಸಬೇಕು ಎನ್ನುವ ಕಾನೂನು ಜಾರಿಯಾಗಿದೆ. ಆದರೂ ನಗರದ ಕೆಲವೆಡೆ ಸಂಚಾರಿ ಪೊಲೀಸರು ವಾಹನಗಳನ್ನು ತೆಗೆಯುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಂಚಾರಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಪೂಜಾರಿ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಟ್ರಾಫಿಕ್ ಪೊಲೀಸ್ ಚಿತ್ರವನ್ನು ಹಂಚಿಕೊಂಡು, "ಯಾವುದೇ ಸಂಚಾರ ಉಲ್ಲಂಘನೆಗಳಿಲ್ಲದಿದ್ದರೂ ಸಹ ಬೆಳ್ಳಂದೂರಿನ ಇಕೋ ಸ್ಪೇಸ್‌ನಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ದಯಮಾಡಿ ಇದರ ಬಗ್ಗೆ ಗಮನ ಹರಿಸಿ" ಎಂದು ಡಿಜಿಪಿ, ಹೆಚ್‌ಎಸ್‌ಆರ್ ಲೇ ಔಟ್ ಟ್ರಾಫಿಕ್ ಪೊಲೀಸ್, ಬೆಂಗಳೂರು ಸಿಟಿ ಪೊಲೀಸ್ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದರು.
ಟ್ವಿಟರ್ ಬಳಕೆದಾರರ ದೂರಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಬೆಂಗಳೂರಿನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ,"ಟ್ರಾಫಿಕ್ ಪೋಲೀಸ್ ಯಾರೆಂದು ಧರಿಸಿರುವ ಕ್ಯಾಮರಾದಿಂದ ಗುರುತಿಸಬಹುದಾಗಿದೆ. ಇದನ್ನು ತಕ್ಷಣವೇ ಪರಿಶೀಲಿಸಿಕೊಳ್ಳಿ" ಎಂದು ಬೆಂಗಳೂರು ಪೂರ್ವ ವಲಯ ಡಿಸಿಪಿ ಅವರಿಗೆ ಸೂಚನೆ ನೀಡಿದ್ದಾರೆ.
"ದಾಖಲೆ ತಪಾಸಣೆಗಾಗಿ ಯಾವುದೇ ವಾಹನ ನಿಲ್ಲಿಸುವಂತಿಲ್ಲ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರ ಪರವಾಗಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ನಿಯಮ ಮೀರಿ ವಾಹನ ನಿಲುಗಡೆ ಮಾಡುವ ಪೊಲೀಸರಿಗೆ ದಂಡ ವಿಧಿಸಲಾಗುತ್ತದೆ. ಸಾಧ್ಯವಾದರೆ ಚಿತ್ರ ತೆಗೆದಿರುವ ದಿನಾಂಕ ಮತ್ತು ಸಮಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ" ಎಂದು ದೂರು ನೀಡಿದ ಟ್ವಿಟರ್ ಬಳಕೆದಾರರನ್ನು ಬೆಂಗಳೂರಿನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಕೇಳಿದ್ದಾರೆ.
PublicNext
17/07/2022 05:04 pm