ವರದಿ - ಗಣೇಶ್ ಹೆಗಡೆ
ಬೆಂಗಳೂರು- ಭೂ ಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಂದು ಜೆಪಿ ನಗರದ ಆಲಹಳ್ಳಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ತನ್ನ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಂಡಿದೆ.
ಜೆಪಿ ನಗರ ಬಡಾವಣೆಯ ಆಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಸರ್ವೆ ಸಂಖ್ಯೆ 5/7, 6/1, 6/4, 6/5, 7/2, 3, 4 ಮತ್ತು 8 ರ 4 ಎಕರೆ 20 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 40 ಶೆಡ್ ಗಳನ್ನು ಬಿಡಿಎ ದಕ್ಷಿಣ ವಲಯದ ಅಧಿಕಾರಿಗಳು ತೆರವುಗೊಳಿಸಿದರು.
ಜೆಪಿ ನಗರ ಬಡಾವಣೆಯ 9 ನೇ ಹಂತದ ನಿರ್ಮಾಣಕ್ಕೆಂದು 1988 ರಲ್ಲಿ ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಪ್ರಾಥಮಿಕ ಅಧಿಸೂಚನೆಯನ್ನು ಬಿಡಿಎ ಹೊರಡಿಸಿತ್ತು. ಇದಾದ ಬಳಿಕ 1997 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು.
ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕೆಲವರು ತಾತ್ಕಾಲಿಕವಾಗಿ 40 ಶೆಡ್ ಗಳನ್ನು ನಿರ್ಮಾಣ ಮಾಡಿ ಜಾಗ ತಮ್ಮದೆಂದು ಪ್ರತಿಪಾದಿಸಿದ್ದರು. ಆದರೆ, ಇದರ ವಿರುದ್ಧ ಬಿಡಿಎ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯ ಬಿಡಿಎ ಪರವಾಗಿ ತೀರ್ಪು ನೀಡಿ, ಸದರಿ ಜಾಗವನ್ನು ವಶಪಡಿಸಿಕೊಳ್ಳುವಂತೆ ಇತ್ತೀಚೆಗೆ ಆದೇಶ ನೀಡಿತ್ತು.
Kshetra Samachara
11/11/2021 06:02 pm