ಬೆಂಗಳೂರು: ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಪೊಲೀಸರು ಹಾಗೂ ಮುಸ್ಲಿಂ ಮುಖಂಡರ ಸಭೆ ನಡೆಯಿತು. ಎಲ್ಲ ತಕರಾರು- ಭಿನ್ನಾಭಿಪ್ರಾಯಕ್ಕೂ ತೆರೆ ಎಳೆಯುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಚಾಮರಾಜಪೇಟೆಯಲ್ಲಿ ನಡೆದ ಸಭೆ ನಂತರ ಮುಸ್ಲಿಂ ಅಸೋಸಿಯೇಶನ್ ಜನರಲ್ ಸೆಕ್ರೆಟರಿ ಝೈನುದ್ದೀನ್ ಮಾತನಾಡಿ, ಶಾಂತಿ ಕಾಪಾಡುವಂತೆ ಹೇಳಿದ್ದೇವೆ. ನಮ್ಮ ಕರ್ತವ್ಯ ನಾವು ಮಾಡ್ತೇವೆ. ನಾವು ಸಹಕಾರ ನೀಡ್ತೇವೆಂದು ಪೊಲೀಸರು ಹೇಳಿದ್ದಾರೆ. 40 ವರ್ಷದಿಂದ ಅಣ್ಣ- ತಮ್ಮಂದಿರ ಹಾಗೇ ಇದ್ದೇವೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಂದಾಯ ಇಲಾಖೆ ಹೇಳಿದ ಬಳಿಕ ಸ್ವಾತಂತ್ರ್ಯೋತ್ಸವ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು.
ಪೊಲೀಸರು ಪ್ರಚೋದನಕಾರಿ ಹೇಳಿಕೆ ನೀಡಬೇಡಿ ಅಂತ ಹೇಳಿದ್ದಾರೆ. ಬಿಬಿಎಂಪಿ ಆದೇಶ ಒಪ್ಪಲ್ಲ. ಇಲ್ಲಿ ಧ್ವಜಾರೋಹಣ ಮಾಡ್ತೇವೆ. ಕಂದಾಯ ಇಲಾಖೆಯಲ್ಲಿ ಒಂದು ತುಂಡು ಪೇಪರ್ ಸಾಕ್ಷಿ ಇಲ್ಲ! ಇದ್ದರೆ ತೋರಿಸಲಿ, ಸಾರ್ವಜನಿಕರ ಮುಂದೆಯೇ ಇಡಲಿ. ನಮ್ಮ ಕಡೆಯಿಂದ ಯಾವುದೇ ಒತ್ತಡ ಇಲ್ಲ. ಹಿಂದೂ- ಮುಸ್ಲಿಂ ಭಾಯ್- ಭಾಯ್ ಹಾಗೇ ಇದ್ದೇವೆ ಎಂದು ಮುಖಂಡ ಅಬ್ದುಲ್ ರಜಾಕ್ ಹೇಳಿದರು.
ಪೊಲೀಸರು ಇವತ್ತು ಮುಸ್ಲಿಂ ಮುಖಂಡರ ಜೊತೆ ಸಭೆ ಮಾಡಿದ್ದಾರೆ. ವಕ್ಫ್ ಬೋರ್ಡ್, ಸಿಎಂಎ ಹಾಗೂ ಇನ್ನಿತರ ಮುಖಂಡರು ಸಲಹೆ ನೀಡಿದ್ದಾರೆ. ಈ ಎಲ್ಲ ಸಲಹೆಗಳನ್ನು ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸೂಚನೆಗಳನ್ನು ಅವ್ರಿಗೆ ಹೇಳಿದ್ದೇವೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದರು.
PublicNext
10/08/2022 10:18 pm