ಬೆಂಗಳೂರು: ಹೀಗೆ ರಾತ್ರಿ ಹೊತ್ತು ಪೆಟ್ರೋಲ್ ಬಂಕ್ ನಲ್ಲಿ ಯುವಕರಿಗೆ ನೀತಿ ಪಾಠ ಹೇಳುತ್ತಿರುವ ಈ ಪೊಲೀಸ್ ಅಧಿಕಾರಿಯನ್ನೊಮ್ಮೆ ನೋಡಿ. ಪೆಟ್ರೋಲ್ ಬಂಕ್ ನಲ್ಲಿ ಇವರಿಗೇನು ಕೆಲಸ? ಎಂಬ ವಿಚಾರ ನಿಮ್ಮ ಮನದಲ್ಲಿ ಮೂಡಿರಬಹುದು.
ಈ ದೃಶ್ಯ ಕಂಡುಬಂದಿದ್ದು ಬಿಟಿಎಂ ಲೇಔಟ್ ಪೆಟ್ರೋಲ್ ಬಂಕ್ ನಲ್ಲಿ. ರಂಜಾನ್ ಮಾಸದ ಹಿನ್ನೆಲೆಯಲ್ಲಿ ಮುಸ್ಲಿಮರು ರಾತ್ರಿ ಜಾಗರಣೆ ಮಾಡುವುದು ವಾಡಿಕೆ. ಅದರಂತೆ ಗುರುವಾರ ರಾತ್ರಿ ಬಹುತೇಕ ಮಂದಿ ಜಾಗರಣೆ ಮಾಡಿ, ಮಸೀದಿಯಿಂದ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು.
ಇವರೆಲ್ಲ ಬಹುಸಂಖ್ಯೆಯಲ್ಲಿ ಏಕಾಏಕಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಿಟಿಎಂ ಲೇಔಟ್ ಬಂಕ್ ಬಳಿ ಗುಂಪು ಸೇರಿದಾಗ ಗೊಂದಲ ಸೃಷ್ಟಿಯಾಗಿತ್ತು. ರಾತ್ರಿ ಹೊತ್ತಿನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ ಎಂದು ಬಂಕ್ ನ ಸಿಬ್ಬಂದಿ ಕೂಡ ನಿರೀಕ್ಷೆ ಮಾಡಿರಲಿಲ್ಲ.
ಇದರಿಂದಾಗಿ ಬಂಕ್ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನರಿತ ಮೈಕೋ ಲೇಔಟ್ ಪೊಲೀಸ್ ಠಾಣೆ ಎಎಸ್ ಐ ಚಂದ್ರಶೇಖರ್ ಏಕಾಂಗಿಯಾಗಿ ಅಲ್ಲಿ ನೆರೆದಿದ್ದ ಯುವಕರಿಗೆ ಬುದ್ಧಿಮಾತು ಹೇಳಿದರು. ಸಾಲಾಗಿ ವಾಹನ ತಂದು ಪೆಟ್ರೋಲ್ ಹಾಕಿಸಿಕೊಳ್ಳಲು ಮನವಿ ಮಾಡಿ ಸಿಬ್ಬಂದಿಗೆ ನೆರವಾದರು. ಅಲ್ಲದೆ, ಕಾನೂನು ಸುವ್ಯವಸ್ಥೆ ಸದಾ ಪಾಲಿಸುವಂತೆ ಆ ಯುವಕರಿಗೆ ತಿಳಿ ಹೇಳಿದರು.
ಎಎಸ್ ಐ ಚಂದ್ರಶೇಖರ್ ಮಾತಿಗೆ ಬೆಲೆ ಕೊಟ್ಟ ಯುವಕರು, ಸರತಿ ಸಾಲಿನಲ್ಲಿ ಬಂದು ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡರು. ಹೀಗೆ ಕಠಿಣ ಸಂದರ್ಭದಲ್ಲಿಯೂ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ಸೇರಿ ಗ್ರಾಹಕರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
30/04/2022 04:14 pm