ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾರ್ಗಸೂಚಿ: ನಿಯಮ ಪಾಲನೆ ಕಡ್ಡಾಯ

ಬೆಂಗಳೂರು: ಕೊರೊನಾ ತೀವ್ರತೆಯಿಂದ ಎರಡು ವರ್ಷ ಸಾರ್ವಜನಿಕ ಗಣೇಶೋತ್ಸವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲು ಎಲ್ಲ ಉತ್ಸವ ಸಮಿತಿಗಳು ನಿರ್ಧರಿಸಿವೆ. ಆದರೆ ಈ ನಡುವೆ ಆಚರಣೆಗೆ ಕೆಲವು ನಿರ್ಬಂಧಗಳನ್ನು ವಿಧಿಸಿರುವ ಬಿಬಿಎಂಪಿ ಮಾರ್ಗಸೂಚಿ ಪ್ರಕಟಗೊಳಿಸಿದೆ. ಯಾರೂ ಕೂಡ ಈ ಮರ್ಗಸೂಚಿಯನ್ನು ಮೀರಬಾರದು ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಹಾಗೂ ಪಾಲಿಕೆ ವತಿಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ‌ ಕುರಿತು ಮುಖ್ಯ ಆಯುಕ್ತರಾದ ತುತುಷಾರ್ ಗಿರಿ ನಾಥ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಯಿತು.

ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುವಾಗುವಂತೆ ಪಾಲಿಕೆಯ 63 ಉಪ ವಿಭಾಗ ಕಛೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲು ಮುಖ್ಯ ಆಯುಕ್ತರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ, ಹಲಸೂರು, ಯಡಿಯೂರು, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ/ಕಲ್ಯಾಣಿಗಳಲ್ಲಿ ಕೂಡಾ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಿದರು.

ಕೆಲ ಪ್ರದೇಶಗಳಲ್ಲಿ ಕೆರೆಗಳು ವಸತಿ ಪ್ರದೇಶದಿಂದ ದೂರವಿರುವುದರಿಂದ ಸಾರ್ವಜನಿಕರು ಚಿಕ್ಕ ಚಿಕ್ಕ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಲುವಾಗಿ ಪ್ರತಿ ವಲಯಗಳ ಪ್ರಮುಖ ಸ್ಥಳ/ ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ಬಿಬಿಎಂಪಿಯು ವಾರ್ಡ್ ವಾರು ಸಂಚಾರಿ ವಿಸರ್ಜನಾ ಘಟಕ(ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿವರ್ಷದಂತೆ ತಾತ್ಕಾಲಿಕ ಟ್ಯಾಂಕ್‌ಗಳನ್ನು ಸ್ಥಾಪಿಸಲು ತಿಳಿಸಿದರು.

ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾದ ಬ್ಯಾರಿಕೇಡಿಂಗ್‌ಗಳನ್ನು ಹಾಗೂ. ಪ್ರತಿಯೊಂದು ವಿಸರ್ಜನಾ ಕೇಂದ್ರಗಳಲ್ಲೂ ಪಾಳಿಯೊಂದರಲ್ಲಿ ಹತ್ತು ಮಂದಿ ನುರಿತ ಈಜುಗಾರರನ್ನು ಮತ್ತು ಅಗತ್ಯ ಸಿಬ್ಬಂದಿ ವರ್ಗದವರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಆಯಾ ಸ್ಥಳಗಳಲ್ಲಿ ಸೂಕ್ತ ಧ್ವನಿವರ್ಧಕಗಳನ್ನು ಅಳವಡಿಸಿ ಜಾಗೃತಿ ಸಂದೇಶದ ಮೂಲಕ ಅರಿವು ಮೂಡಿಸಿ, ಅಗತ್ಯವಾದ ವಿದ್ಯುತ್ ದ್ವೀಪಗಳ ಸೌಲಭ್ಯಗಳನ್ನು ತಪ್ಪದೇ ಅಳವಡಿಸಲು ಹೇಳಿದರು.

ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು (ಪೂಜಾ ಸಾಮಗ್ರಿಗಳಾದ ಹೂವು, ಬಾಳೆಯ ಕಂದು, ತಳಿರು ತೋರಣ, ಮತ್ತಿತರ ತ್ಯಾಜ್ಯ ವಸ್ತುಗಳನ್ನು) ಸಂಗ್ರಹಿಸಿ ನಿಗದಿತ ಕಂಟೈನರ್‌ಗಳ ಮೂಲಕ ಅಗಿದ್ದಾಂಗೆ ತೆರವುಗೊಳಿಸಲು ಅಗತ್ಯ ಸ್ವಚ್ಛತಾ ಸಿಬ್ಬಂದಿ ಹಾಗೂ ಸಾಗಣೆ ವಾಹನಗಳನ್ನು ಸಜ್ಜುಗೊಳಿಸಲು ತಿಳಿಸಿದರು.

ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್‌ಗಳ ವ್ಯವಸ್ಥೆ, ಕ್ರೇನ್‌ಗಳ ವ್ಯವಸ್ಥೆಗಳನ್ನು ಕೂಡ ಸಿದ್ದಪಡಿಸಿರಬೇಕು. ಜೊತೆಗೆ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಗಾಗಿ ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳಲು ಸೂಚಿಸಿದರು.

ವಿಸರ್ಜನಾ ಮೆರವಣಿಗೆಯನ್ನು ಕೊಂಡೊಯ್ಯುವ ವೇಳೆ ಪಟಾಕಿ, ಸಿಡಿ ಮದ್ದು ಸಿಡಿಸುವುದು ಹಾಗೂ ನಾಗರಿಕರಿಗೆ ತೊಂದರೆಯಾಗದಂತೆ ಕಡ್ಡಾಯವಾಗಿ ಅಗತ್ಯ ಕ್ರಮ ಕೈಗೊಳ್ಳಲುಬೇಕು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳು ಕಲುಷಿತಗೊಳ್ಳದಂತೆ ತಡೆಗಟ್ಟಲು ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ನಿಗದಿ ಪಡಿಸಿದ ಸ್ಥಳಗಳಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕೆಂದು ಹಾಗೂ ಬಣ್ಣದ/ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಿಲ್ಲಿಸಿ ಪರಿಸರ ಸ್ನೇಹಿ ಮೂರ್ತಿಗಳನ್ನಿಟ್ಟು ಪೂಜಿಸಬೇಕೆಂದು ಸಾರ್ವಜನಿಕರಲ್ಲಿ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿಲಾಗಿದ್ದು, ಸದರಿ ವಸ್ತುಗಳನ್ನು ಬಳಸಿ ತಯಾರಿಸುವ, ಮಾರಾಟ ಮಾಡುವ ಪ್ರದೇಶಗಳನ್ನು ಸಂಬಂಧಪಟ್ಟ ವಲಯದ ಜಂಟಿ ಆಯುಕ್ತರು, ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳು(ಘ.ತ್ಯಾ.ನಿ) ರವರು ವಾರ್ಡ್‌ವಾರು ಪಟ್ಟಿ ಮಾಡಿ, ಸ್ಥಳ ತನಿಖೆ ಕೈಗೊಂಡು ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿಕೊಂಡು ಗಣೇಶ ಮೂರ್ತಿ ತಯಾರಿಕೆಯನ್ನು ನಡೆಸುತ್ತಿದ್ದಲ್ಲಿ ಹಾಗೂ ಮಾರಾಟ ಮಾಡುತ್ತಿರುವವರಿಗೆ ದಂಡ ವಿಧಿಸಿ ಜೊತೆಗೆ ಸೂಕ್ತ ಕ್ರಮವಹಿಸಲು ಸೂಚಿಸಿದ್ದಾರೆ.

ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ವಿಸರ್ಜನೆ, ಸ್ವಚ್ಛತೆ ಕಾಪಾಡುವ ಹಾಗೂ ಇನ್ನಿತರೆ ಸೂಚನೆಗಳನ್ನು ಕಡ್ಡಾಯವಾಗಿ ಅನುಮತಿಯ ಆದೇಶ ಪತ್ರದಲ್ಲಿ ವಿವರಣೆ ಸಮೇತ ಆದೇಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಫೆಕ್ಸ್/ಬ್ಯಾನರ್ ಅಳವಡಿಸುವುದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಸಾರ್ವಜನಿಕರು ಸಹ ಸಹಕರಿಸಲು ಕೋರಿದೆ.

ಸಭೆಯಲ್ಲಿ ಬಿಬಿಎಂಪಿಯ ಎಲ್ಲಾ ವಿಶೇಷ/ವಲಯ ಆಯುಕ್ತರು, ಪೊಲೀಸ್ ಅಧಿಕಾರಿಗಳು, ವಲಯ ಜಂಟಿ ಆಯುಕ್ತರು, ಅಗ್ನಿಶಾಮಕ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

21/08/2022 05:04 pm

Cinque Terre

14.55 K

Cinque Terre

0

ಸಂಬಂಧಿತ ಸುದ್ದಿ