ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಇಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಚಾಮರಾಜಪೇಟೆ ಮೈದಾನ ಈದ್ಗಾ ಮೈದಾನವೋ ಅಥವಾ ಆಟದ ಅಂಗಳವೋ ಎಂಬ ಬಗ್ಗೆ ತೀರ್ಮಾನ ಮಾಡಬೇಕು ಎಂದವರು ಆಯುಕ್ತರಿಗೆ ತಿಳಿಸಿದ್ದಾರೆ.
ದಾಖಲೆ ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನ ಕೈಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪಿ.ಸಿ.ಮೋಹನ್ ವಿನಂತಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಪಿ.ಸಿ.ಮೋಹನ್, ಚಾಮರಾಜಪೇಟೆ ಮೈದಾನ ಆಟದ ಮೈದಾನವಾಗಿಯೇ ಇರುತ್ತದೆ. ಅದು ಬಿಬಿಎಂಪಿ ಆಟದ ಮೈದಾನ. ಇಲ್ಲಿ ಹಬ್ಬಗಳ ಆಚರಣೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ ಎಂದರು.
ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ಗಣೇಶ ಉತ್ಸವ ಮಾಡಲು ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಇದು ಬಿಬಿಎಂಪಿ ಆಟದ ಮೈದಾನವಾಗಿರುವುದರಿಂದ ಅದಕ್ಕೆ ‘ಜಯಚಾಮರಾಜೇಂದ್ರ ಆಟದ ಮೈದಾನ’ ಎಂಬ ಹೆಸರಿಡಲು ನಾನು ಆಗ್ರಹಿಸಿದ್ದೇನೆ. ಇಲ್ಲಿ ಯಾರೂ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ. ಹೀಗಾಗಿ ನಮಗೂ ಹಬ್ಬದ ಆಚರಣೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು, ವಾರದ ಒಳಗೆ ತೀರ್ಮಾನಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ. ಅನುಮತಿ ಕೊಡದಿದ್ದರೂ ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ. ಚಾಮರಾಜಪೇಟೆ ಆಟದ ಮೈದಾನ ಸರ್ಕಾರದ ಸ್ವತ್ತು. ವರ್ಷಕ್ಕೊಂದು ಸಲ ಮೈದಾನವನ್ನು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಕೊಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದರು.
PublicNext
14/07/2022 03:46 pm