ಬೆಂಗಳೂರು: ಬೇಡಿಕೆಯನ್ನು ಮೀರಿದ ಆಹಾರ ಲಭ್ಯತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಬಹುತೇಕ ರೈತರು, ಸಣ್ಣ ಮತ್ತು ಕನಿಷ್ಠ ಮಟ್ಟದವರಾಗಿದ್ದಾರೆ. ಇಲ್ಲಿ ಬೆಳೆಗಳ ಉತ್ಪಾದನೆಯನ್ನು ವಿಸ್ತರಿಸಲು, ರಫ್ತು ಸಾಮರ್ಥ್ಯ ಹೆಚ್ಚಿಸಲು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಕೈಗೆಟುಕುವ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನಗಳ ಅಗತ್ಯವಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ಜಿಕೆವಿಕೆ ಕೃಷಿ ಮೇಳ ಆವರಣದಲ್ಲಿ ನಡೆದ ಐಮಾ ಅಗ್ರಿಮ್ಯಾಕ್ ಇಂಡಿಯಾ 2022 ಪ್ರದರ್ಶನ ಮತ್ತು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 22 ವರ್ಷಗಳ ನಂತರ ದೆಹಲಿಯ ಹೊರಗೆ ಮೊದಲ ಬಾರಿಗೆ ನಡೆಯುತ್ತಿರುವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಚಿವೆ, ಕಳೆದ ವರ್ಷ ಭಾರತವು 314 ಮಿಲಿಯನ್ ಮೆಟ್ರಿಕ್ ಟನ್ ಧಾನ್ಯಗಳು ಮತ್ತು 334 ಮೆಟ್ರಿಕ್ ಮಿಲಿಯನ್ ಟನ್ ಹಣ್ಣು- ತರಕಾರಿಗಳನ್ನು ಉತ್ಪಾದಿಸಿದೆ ಎಂದು ಹೇಳಿದರು.
ದೇಶಕ್ಕೆ ಈಗ ಬೇಕಾಗಿರುವುದು ಕೈಗೆಟುಕುವ ದರದಲ್ಲಿ ಮತ್ತು ಗುಣಮಟ್ಟದ ಆಹಾರ ಸಂಸ್ಕರಣೆ, ಕೃಷಿ ಮಾರುಕಟ್ಟೆ ಮತ್ತು ಕೃಷಿ ರಫ್ತು ಮಾರ್ಗಗಳು.
ದೇಶದ ಒಳಗೆ ಮತ್ತು ಹೊರಗಿನ ಕೃಷಿ ಯಂತ್ರೋಪಕರಣಗಳ ತಯಾರಕರು ಮತ್ತು ತಂತ್ರಜ್ಞಾನ ಅಭಿವರ್ಧಕರಿಗೆ ಆಹ್ವಾನ ನೀಡಿದ ಅವರು, ಆಹಾರ ಸಂಸ್ಕರಣೆಗಾಗಿ ಯಂತ್ರೋಪಕರಣಗಳನ್ನು ತಯಾರಿಸುವಂತೆ ಒತ್ತಾಯಿಸಿದರು. ಬೆಳೆಗಳಿಗೆ ಮೌಲ್ಯವರ್ಧನೆ ಅಥವಾ ಮಾರುಕಟ್ಟೆಯ ಕೊರತೆಯಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳು ಹೇಗೆ ನಿಷ್ಟ್ರಯೋಜಕವಾಗಿ ಹೋಗುತ್ತವೆ ಎಂಬುದನ್ನು ಕೇಂದ್ರ ಸಚಿವೆ ವಿವರಿಸಿದರು.
Kshetra Samachara
01/09/2022 10:32 pm