ಆನೇಕಲ್: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳಿಗೆ ಅನೇಕ ಅಮಾಯಕರ ಪ್ರಾಣ ಬಲಿ ಪಡೆದುಕೊಂಡಿವೆ. ಅದರ ಮುಂದುವರಿದ ಭಾಗವಾಗಿ ಆನೇಕಲ್ ಪಟ್ಟಣದ ಹೊಸೂರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಗುಂಡಿಗಳ ಮಧ್ಯೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಅಪಾಯದ ನಡುವೆ ಸಂಚಾರ ಮಾಡಬೇಕಾಗಿದೆ.
ಆನೇಕಲ್ ಪುರಸಭೆ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ಅರಳಿಕಟ್ಟೆಯಿಂದ ಗಾಂಧೀ ವೃತ್ತದವರೆಗಿನ ರಸ್ತೆ ಬಹುತೇಕ ರಸ್ತೆ ಗುಂಡಿಗಳಿಂದ ತುಂಬಿವೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳೇ ತುಂಬಿ ಹೋಗಿವೆ. ಈ ರಸ್ತೆಯಲ್ಲಿ ಸಂಚಾರ ನಡೆಸಬೇಕಾದರೆ ಹರಸಾಹಸ ಪಡಬೇಕಾಗಿದೆ. ಮಳೆ ಬಂದಾಗ ರಸ್ತೆ ಗುಂಡಿಗಳನ್ನು ಲೋಕೋಪಯೋಗಿ ಇಲಾಖೆಯವರು ಮುಚ್ಚುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿಗಳು ತಲೆ ಎತ್ತುತ್ತವೆ. ಶಾಶ್ವತವಾದ ಪರಿಹಾರ ಮರಿಚಿಕೆಯಾಗಿದೆ.
ಆನೇಕಲ್-ಹೊಸೂರು ರಸ್ತೆಯಲ್ಲಿ ಪ್ರತಿದಿನ ನೂರಾರು ಬೃಹತ್ ವಾಹನಗಳು ಸಂಚರಿಸುತ್ತವೆ. ಗುಂಡಿಗಳನ್ನು ತಪ್ಪಿಸಲು ಬೃಹತ್ ವಾಹನಗಳು ಅತ್ತಿಂದಿತ್ತ ಸಾಗುವುದರಿಂದ ದ್ವಿಚಕ್ರ ವಾಹನಗಳು, ಸೈಕಲ್ ಸವಾರರು ಪರದಾಡುವಂತಾಗಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಸಮಂದೂರು, ಗುಡ್ಡನಹಳ್ಳಿ, ಮಾರನಾಯಕನಹಳ್ಳಿ, ಗೆರಟಿಗನಬೆಲೆ, ಸಬ್‌ಮಂಗಲ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಪ್ರತಿದಿನ ಇದೇ ರಸ್ತೆಯಲ್ಲಿ ಸಾಗಬೇಕು. ಬೇರೆ ಪರ್ಯಾಯ ರಸ್ತೆಗಳಿಲ್ಲ. ಆದರೆ ಈ ರಸ್ತೆ ಹದಗೆಟ್ಟಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದು ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎಂಬುದನ್ನು ಹುಡುಕಬೇಕಾಗಿದೆ. ಮಳೆಯಿಂದಾಗಿ ವಾಹನ ಸವಾರರು ಗುಂಡಿಗಳಲ್ಲಿ ಎದ್ದು ಬಿದ್ದು ಸಾಗಬೇಕಾಗಿದೆ.
ಇನ್ನು ಆನೇಕಲ್-ಹೊಸೂರು ರಸ್ತೆಯಲ್ಲಿ ಹಲವಾರು ವಿದ್ಯಾ ಸಂಸ್ಥೆಗಳಿವೆ. ಶಿರಡಿ ಸಾಯಿ ಎಂಜಿನಿಯರಿಂಗ್ ಕಾಲೇಜು, ವಿಶ್ವ ಚೇತನ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಕಾವೇರಿ ಪದವಿ ಪೂರ್ವ ಕಾಲೇಜು, ಸಂತ ಜೋಸೆಫ್ ಶಾಲೆ, ಆಕ್ಸ್‌ಫರ್ಡ್ ಶಾಲೆ, ಎಪಿಎಸ್ ಶಾಲೆ, ಲಿಂಕನ್ ಶಾಲೆ ಸೇರಿದಂತೆ ಹಲವು ವಿದ್ಯಾ ಸಂಸ್ಥೆಗಳು ಈ ರಸ್ತೆಯಲ್ಲಿವೆ. ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸೈಕಲ್, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ.
ರಸ್ತೆ ಗುಂಡಿಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಒಂದು ಕಿ.ಮೀ. ಸಾಗುವುದು ಹತ್ತು ಕಿ.ಮೀ. ಸಾಗಿದಂತಾಗುತ್ತದೆ. ಈ ರಸ್ತೆಯಲ್ಲಿ ಸಾಗಲು ಕನಿಷ್ಠ 20ನಿಮಿಷಕ್ಕೂ ಹೆಚ್ಚು ಸಮಯ ಹಿಡಿಯುತ್ತದೆ. ಗುಂಡಿಗಳನ್ನು ತಪ್ಪಿಸಿ ಸಾಗುವುದು ತಂತಿ ಮೇಲಿನ ನಡಿಗೆಯಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವವರು ಹಿಡಿ ಶಾಪ ಹಾಕಿ ಸಂಚರಿಸುತ್ತಾರೆ. ಇನ್ನದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
19/05/2022 01:10 pm