ಮಹಾದೇವಪುರ: ಮಹಾದೇವಪುರ ಕ್ಷೇತ್ರದ ಕಿತ್ತಗನೂರು ಗ್ರಾಪಂ ವ್ಯಾಪ್ತಿಯ ಕಿತ್ತಗನೂರು ಗ್ರಾಮವೂ ಬಿಬಿಎಂಪಿಗೆ ಹೊಂದಿಕೊಂಡಿರುವ ಗ್ರಾಮವಾಗಿದ್ದು, ಜನವಸತಿ ಪ್ರದೇಶ ಇಲ್ಲಿ ಹೆಚ್ಚಾದಂತೆ ಜಾಗಕ್ಕೆ ಚಿನ್ನದ ಬೆಲೆ ಬಂದಿದೆ. ಇದರ ಪರಿಣಾಮ ಸ್ಮಶಾನಕ್ಕೂ ಸಮರ್ಪಕ ರಸ್ತೆ ಇಲ್ಲದೆ ದಲಿತರು ಪರದಾಡುವಂತಾಗಿದೆ.
ಕಳೆದ 4 ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳ ಕಚೇರಿ ಅಲೆದು ಚಪ್ಪಲಿ ಸವೆದಿದೆ ಹೊರತು ಸಮಸ್ಯೆ ಆಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಿರುವ ರಸ್ತೆ ಕಿರಿದಾಗಿರುವ ಕಾರಣ ಒಬ್ಬ ವ್ಯಕ್ತಿ ಸಾಗಲು ಕಷ್ಟವಾಗಿದ್ದು, ರಸ್ತೆಯಲ್ಲಿ ಪಾರ್ಥಿವ ಶರೀರವನ್ನು ಹೊತ್ತೊಯ್ಯುವುದು ಸಾಹಸವೇ ಆಗಿದೆ.
ಇನ್ನು, ಕೊಳಚೆ ನೀರು ಸೇರ್ಪಡೆಯಿಂದ ಸ್ಮಶಾನ ಪರಿಸರ ಕೊಳಚೆ ಗುಂಡಿಯಾಗಿದೆ. ಗ್ರಾಮಸ್ಥರು ಸ್ಮಶಾನಕ್ಕೆ ಸಾಗಲು ಪರ್ಯಾಯ ವ್ಯವಸ್ಥೆಯಾಗಿ ರೈತರ ಜಮೀನಿನಲ್ಲೇ ಸಾಗಬೇಕಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಆಲಿಸುವ ಜತೆಗೆ ಶೀಘ್ರ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
PublicNext
22/02/2022 12:08 pm