ಬೆಂಗಳೂರು: ಕಸದ ಬಿಲ್ ಸುಮಾರು 250 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ನಡೆ ಖಂಡಿಸಿ ಶುಕ್ರವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ನಿಲ್ಲಿಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಗುತ್ತಿಗೆದಾರರು ಪ್ರತಿಭಟನೆ ನಡೆಸಿ, ಬಿಬಿಎಂಪಿ ಜಂಟಿ ಕ್ರಿಯಾ ವೇದಿಕೆ ರಚಿಸಿಕೊಂಡು ಪಾಲಿಕೆಯಲ್ಲಿ ಸರ್ವಾಧಿಕಾರಿ ಧೋರಣೆ, ಏಕಚಕ್ರಾಧಿಪತ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ, ವಿಶೇಷ ಆಯುಕ್ತರು (ಹಣಕಾಸು) ಅವರಿಂದ ಹಣಕಾಸು ಇಲಾಖೆಯಲ್ಲಿನ ಅನಾನುಕೂಲ, ತೊಂದರೆಗಳಿಂದ ಬೇಸತ್ತು ಶಾಂತಿಯುತ ಧರಣಿ ನಡೆಸಲಾಗಿದೆ ಎಂದು ಪ್ರತಿಭಟನೆಕಾರರು ಹೇಳಿದರು.
ಶುಕ್ರವಾರದಿಂದ ಬೆಂಗಳೂರಿನಲ್ಲಿ ಕಸ ಎತ್ತಲು ಗುತ್ತಿಗೆದಾರರು ಮುಂದಾಗುವುದಿಲ್ಲ. 6 ತಿಂಗಳಿಂದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಿಲ್ಲ. ಪ್ರಮುಖವಾಗಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಈ ಕ್ರಮ ತೆಗೆದುಕೊಂಡಿಲ್ಲ. ಬಾಕಿ ಬಿಲ್ ಪಾವತಿಯಾಗುವ ವರೆಗೆ ನಗರದಲ್ಲಿ ಕಸ ವಿಲೇವಾರಿ ಮಾಡಲ್ಲ ಎಂದು ಗುತ್ತಿಗೆದಾರರು ಪಟ್ಟು ಹಿಡಿದರು.
ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಎನ್. ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ ಧರಣಿ ನಾಡಿದ್ದು ನಡೆಯಲಿದ್ದು, ಕಸದ ಬಿಲ್ ಅಂದಾಜು 250 ಕೋಟಿ ರೂ. ಬಾಕಿ ಉಳಿಸಿದ್ದಾರೆ. ತೋಟಗಾರಿಕೆ, ಹೊರಗುತ್ತಿಗೆ ನೌಕರರಿಗೆ ಮತ್ತು ಸಾಮಾಜಿಕ ಸೇವಾ ಸಂಘಟನೆಗಳಿಗೆ ಅನುದಾನ ಬಿಡುಗಡೆ ಆದ ಕಾರಣದಿಂದ ಪ್ರತಿಭಟನೆ ಮೂಲಕ ನ್ಯಾಯಸಮ್ಮತ ಬೇಡಿಕೆಗೆ ಆಗ್ರಹಿಸಲಾಗಿದೆ ಎಂದರು.
ಬೃಹತ್ ಬೆಂಗಳೂರು ಮನಪಾ, ಸ್ವಚ್ಛತಾ ಮತ್ತು ಗುತ್ತಿಗೆದಾರರು, ಲಾರಿ ಮಾಲೀಕರ ಸಂಘ, ಪ್ರಜಾ ವಿಮೋಚನಾ ಸಮಿತಿ ಬಿಬಿಎಂಪಿ, ಅರಣ್ಯ ವಿಭಾಗ ಗುತ್ತಿಗೆದಾರರ ಸಂಘ, ಬಿಬಿಎಂಪಿ, ಡಿಇಒ, ಐಟಿ ನೌಕರರ ಸಂಘ, ಬಿಬಿಎಂಪಿ ತೋಟಗಾರಿಕೆ ಇಲಾಖೆ ಗುತ್ತಿಗೆದಾರರ ಸಂಘ, ವಿಶೇಷ ಚೇತನರ ಸಂಘ ಸಹಿತ ಪ್ರಮುಖರು ಹೋರಾಟದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
PublicNext
16/02/2022 04:35 pm