ಮಹಾದೇವಪುರ: ಕೆರೆ, ಗೋಕಟ್ಟೆ, ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡಿ ಕುಸಿಯುತ್ತಿರುವ ಅಂತರ್ಜಲ ಪುನಶ್ಚೇತನಗೊಳಿಸಲು ಬೆಂ. ಪೂರ್ವ ತಾಲ್ಲೂಕಿನ ಮಹಾದೇವಪುರ ಗ್ರಾಮಾಂತರ ಪ್ರದೇಶದಲ್ಲಿ ಪುರಾತನ ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡಲಾಗಿದೆ. ವಿವಿಧ ಯೋಜನೆ ಹಾಗೂ ಶಾಸಕರ ಅನುದಾನದಲ್ಲಿ 9 ಗ್ರಾಮಗಳ ಕಲ್ಯಾಣಿಗಳನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.
ಮಹಾದೇವಪುರ ಕ್ಷೇತ್ರದ ಮಂಡೂರಿನ ಶ್ರೀ ಸೋಮೇಶ್ವರ ದೇವಾಲಯ ಪಕ್ಕದ ಕಲ್ಯಾಣಿ ಮತ್ತು ಗೋಕುಂಟೆ, ಬಿದರಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗದ ಕಲ್ಯಾಣಿ, ಜ್ಯೋತಿಪುರ ಕಾಶಿ ಶ್ರೀ ವಿಶ್ವನಾಥ ದೇಗುಲ ಬಳಿಯ ದೊಡ್ಡಗುಬ್ಬಿ ಮತ್ತು ಕಾಡು ಸೊಣ್ಣಪ್ಪನಹಳ್ಳಿ ಗ್ರಾಮದಲ್ಲಿ ಮಳೆನೀರಿನಿಂದ ಕಲ್ಯಾಣಿ ಭರ್ತಿಯಾಗಿವೆ. ಕ್ಷೇತ್ರದಲ್ಲಿ 9 ಕಲ್ಯಾಣಿ ಅಭಿವೃದ್ಧಿಪಡಿಸಿದ್ದು, ಈ ವರ್ಷ 5 ಕಲ್ಯಾಣಿಗಳ ಜೀರ್ಣೋದ್ಧಾರಕ್ಕೆ 20 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ.
ಮಹಾದೇವಪುರ ಗ್ರಾಮಾಂತರದಲ್ಲಿ 22 ಕಲ್ಯಾಣಿಗಳಿದ್ದು, ಹಂತ ಹಂತದ ಅಭಿವೃದ್ಧಿ ಯೋಜನೆ ಹಾಕಲಾಗಿದೆ.
ಅಂತರ್ಜಲ ಮಟ್ಟ ಸುಧಾರಣೆಗೆ ಕಲ್ಯಾಣಿ, ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪುರಾತನ ಕಲ್ಯಾಣಿ, ಗೋಕಟ್ಟೆ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಬೆಂ.ಪೂರ್ವ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ತಿಳಿಸಿದರು.
ಕಲ್ಯಾಣಿ, ಕೆರೆಗಳ ಅಭಿವೃದ್ಧಿಯಿಂದ ದನಕರುಗಳಿಗೆ ಕುಡಿಯಲು ನೀರು, ವಿಶೇಷವಾಗಿ ಹನುಮ ಜಯಂತಿಯಂದು ಹತ್ತಾರು ಹಳ್ಳಿಗಳಿಂದ ಬರುವ ಭಕ್ತಾದಿಗಳು ಕಲ್ಯಾಣಿ ಸುತ್ತಲೂ ದೀಪ ಹಚ್ಚಿ ಸಂಭ್ರಮಿಸುತ್ತಾರೆ ಎಂದು ಬಿದರಹಳ್ಳಿ ಗ್ರಾಪಂ ಅಧ್ಯಕ್ಷ ವರುಣ್ ಗೌಡ ತಿಳಿಸಿದರು.
Kshetra Samachara
26/01/2022 01:06 pm