ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ವಿರುದ್ಧ ರೈತರು ನಡೆಸುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ಯಾವುದೇ ಪಕ್ಷದ ನೆರಳಿನಲ್ಲಿ ಪ್ರತಿಭಟನೆ ನಡೆಯದೆ ರೈತರು, ಸ್ಥಳೀಯ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರಿಂದ ಧರಣಿ ನಡೆಯುತ್ತಿದೆ. ಆದರೆ, ಸ್ಥಳಕ್ಕೆ ಸ್ಥಳೀಯ ಶಾಸಕ ಟಿ. ವೆಂಕಟರಮಣಯ್ಯ ಭೇಟಿ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಟಿ. ವೆಂಕಟರಮಣಯ್ಯ ಕಾಂಗ್ರೆಸ್ ನಿಂದ 2 ಬಾರಿ ಚುನಾಯಿತರಾಗಿದ್ದಾರೆ. ಬಿಬಿಎಂಪಿ ಕಸ ಸುರಿಯುತ್ತಿರುವ ಎಂಎಸ್ ಜಿಪಿ ಘಟಕದಿಂದ ಸನಿಹದಲ್ಲೇ ಶಾಸಕರ ಸ್ವಗ್ರಾಮ ಅಪ್ಪಕಾರನಹಳ್ಳಿ ಇದೆ. ಇನ್ನು, 2019ರಲ್ಲಿ ಬಿಬಿಎಂಪಿ ಕಸದ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಶಾಸಕರ ಸಮ್ಮುಖದಲ್ಲೇ ನಡೆದಿತ್ತು. ಹಂತ ಹಂತವಾಗಿ ಬಿಬಿಎಂಪಿ ಕಸ ಸಂಸ್ಕರಣೆ ಮಾಡುವ ಎಂಎಸ್ ಜಿಪಿ ಘಟಕ ಮುಚ್ಚುವ ಭರವಸೆ ಸರ್ಕಾರ ನೀಡಿದ ನಂತರ ಧರಣಿ ಹಿಂತೆಗೆದು ಕೊಳ್ಳಲಾಗಿತ್ತು.
ಆದರೆ, ಎಂಎಸ್ ಜಿಪಿ ಘಟಕ ಮುಚ್ಚುವ ಬದಲಿಗೆ ಬಿಬಿಎಂಪಿ ಮತ್ತಷ್ಟು ಕಸ ಸುರಿಯಲು ಪ್ರಾರಂಭಿಸಿತು. ಇದರಿಂದ ಗಾಳಿ- ನೀರು, ಮಣ್ಣು ವಿಷವಾಗಿ ವಾಸ ಮಾಡಲು ಕಷ್ಟವಾಗಿದೆ. ಆದ್ದರಿಂದ ಎಂಎಸ್ ಜಿಪಿ ಘಟಕ ಶಾಶ್ವತವಾಗಿ ಮುಚ್ಚುವಂತೆ ರೈತರು ಆರು ದಿನಗಳಿಂದಲೂ ಧರಣಿ ಕುಳಿತಿದ್ದಾರೆ. ಒಮ್ಮೆ ಬಿಬಿಎಂಪಿ ಕಸದ ವಿರುದ್ಧ ಪ್ರತಿಭಟನೆಗೆ ಇಳಿದ ಶಾಸಕರು ಈಗ ಪ್ರತಿಭಟನೆಗೆ ಬಾರದಿರುವುದು ಕುತೂಹಲ ಮೂಡಿಸಿದೆ.
Kshetra Samachara
30/11/2021 10:12 am