ವರದಿ - ಗಣೇಶ್ ಹೆಗಡೆ
ಬೆಂಗಳೂರು: ಪರಿಸರ ಸ್ನೇಹಿ ಸಮೂಹ ಸಾರಿಗೆ ಎಂಬ ಹೆಗ್ಗಳಿಕೆ ಪಡೆದಿರುವ ನಮ್ಮ ಮೆಟ್ರೋ, ರೈಲು ಸಂಚಾರಕ್ಕೂ ಸೌರ ವಿದ್ಯುತ್ ಬಳಸಿಕೊಳ್ಳುವ ಯೋಜನೆ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) 2023ರೊಳಗೆ ಹಂತ 2, 2ಎ ಮತ್ತು 2ಬಿ (ಕೆ.ಆರ್.ಪುರ-ಯಲಹಂಕ-ಬೆಂಗಳೂರು ವಿಮಾನ ನಿಲ್ದಾಣ) ಮೆಟ್ರೋ ನಿಲ್ದಾಣಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಂಡಿದೆ.
ಪ್ರಸ್ತುತ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಕನಕಪುರ ರಸ್ತೆ ಮೆಟ್ರೋ ಕಾರಿಡಾರ್‌ನಲ್ಲಿರುವ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಮೆಟ್ರೋ ಹಂತ-1ರ ನಿಲ್ದಾಣಗಳಲ್ಲಿ ಸೌರ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಪ್ರಸ್ತುತ ಇದ್ದ ರೀತಿಯಲ್ಲಿಯೇ ಕಾರ್ಯನಿರ್ವಹಿಸಲಿವೆ.
ಮೆಟ್ರೋ ನಿಲ್ದಾಣಕ್ಕೆ ಬೇಕಾದ ವಿದ್ಯುತ್ ಬೆಳಕು, ಎಸ್ಕಲೇಟರ್‌ಗಳು ಮತ್ತು ಎಸಿಗೆ ಅಗತ್ಯವಿರುವ ಹೆಚ್ಚಿನ ವಿದ್ಯುತ್ ಕೂಡ ಸೌರಶಕ್ತಿಯ ಮೂಲಕ ಪೂರೈಕೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎನ್ನುತ್ತಾರೆ.
ಸದ್ಯ 56 ಕಿಮೀ ವಿದ್ಯುತ್ ರೈಲು ವ್ಯವಸ್ಥೆಗೆ ತಿಂಗಳಿಗೆ 65 ಲಕ್ಷ ಯೂನಿಟ್ ವ್ಯಯವಾಗುತ್ತಿದೆ. ಹಂತ 2, 2ಎ ಮತ್ತು 2ಬಿ ಪೂರ್ಣಗೊಂಡ ನಂತರ ಅಂದಾಜು ಮಾಸಿಕ 205 ಲಕ್ಷ ಯೂನಿಟ್ ಬೇಕಾಗುವ ನಿರೀಕ್ಷೆ ಇದೆ. ರೈಲು ಓಡಾಟಕ್ಕೆ ಪ್ರಸ್ತುತ ಮಾಸಿಕ ವಿದ್ಯುತ್ ವೆಚ್ಚ ಸುಮಾರು 3.9 ಕೋಟಿ ರೂ. ಬೇಕಾಗಿದ್ದು, ಸದ್ಯ ಸೌರ ಫಲಕಗಳ ಮೂಲಕ 1.8 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರಿಂದ ತಿಂಗಳಿಗೆ 10.8 ಲಕ್ಷ ರೂ. ಉಳಿತಾಯವಾಗುತ್ತಿದೆ ಎನ್ನುತ್ತಾರೆ ಬಿಎಂಆರ್ ಸಿಎಲ್ ಎಂ.ಡಿ ಅಂಜುಂ ಫರ್ವೇಜ್
PublicNext
11/04/2022 05:22 pm