ದೊಡ್ಡಬಳ್ಳಾಪುರ: ಪರಿಸರ ಪ್ರೇಮ ಕೇವಲ ಗಿಡ ನೆಟ್ಟು ಪೊಟೋ ತಗೆಸಿಕೊಳ್ಳುವುದಕ್ಕೆ ಸೀಮಿತವಾಗಬಾರದು. ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ಸೇವಾ ಟ್ರಸ್ಟ್ ಕೈಗೊಂಡಿರುವ ಕಾರ್ಯವನ್ನು ಮಾದರಿಯನ್ನಾಗಿ ಯುವಕರು ಮೈಗೂಡಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ಸೇವಾ ಟ್ರಸ್ಟ್ ಕಚೇರಿ ಆವರಣದಲ್ಲಿ ಪ್ರಾಣಿಗಳಿಗೆ ನೀರಿನ ಅನುಕೂಲಕ್ಕೆ ತೊಟ್ಟಿಗಳ ಅಳವಡಿಸಲು ಚಾಲನೆ ಹಾಗೂ ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಮಾತನಾಡಿದ ಅವರು ಜಿಲ್ಲಾ ಕಾನೂನು ಸೇವಾ ಸಮಿತಿವತಿಯಿಂದ ಕೆರೆಗಳ ಸಂರಕ್ಷಣೆ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ನಾಗರ ಕೆರೆಗೆ ತೆರಳಿದ್ದ ವೇಳೆ ಮದ್ಯದ ಬಾಟಲ್‌ಗಳು, ಪೂಜೆ ಮಾಡಿದ ನಂತರದ ಬಿಸಾಡಿದ ವಸ್ತುಗಳು ಕಂಡು ಬಂದವು. ಮದ್ಯದ ಬಾಟಲ್ ಬಿಸಾಡಿದವರು ನಮ್ಮದೇ ಯುವಕರು. ಅಂತಹ ಯುವಕರು ಬದಲಾಗಿ ತಾಲೂಕಿನ 50 ಕೆರೆಗಳ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಬೇಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳ ಉಳಿವಿಗಾಗಿ ಯುವ ಸಮುದಾಯ ನಮ್ಮೊಂದಿಗೆ ಆಂದೋಲನದಲ್ಲಿ ಭಾಗಿಯಾಗಬೇಕಿದೆ. ಆ ಮೂಲಕ ವನ್ಯ ಜೀವಿಗಳಿಗೆ ತೊಟ್ಟಿಗಳಲ್ಲಿ ನೀರನ್ನು ಇಡಬೇಕಾದ ಅನಿವಾರ್ಯತೆ ಉಂಟಾಗುವುದನ್ನು ತಪ್ಪಿಸಬೇಕಿದೆ ಎಂದರು.
ಆರ್.ಎಲ್ ಜಾಲಪ್ಪ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಪ್ರಾಣಿ ಪಕ್ಷಿಗಳ ಉಳಿವಿಗೆ ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ಸೇವಾ ಟ್ರಸ್ಟ್ ಕೈಗೊಂಡಿರುವ ಕಾರ್ಯ ಅಭಿನಂದನೀಯ. ನಮ್ಮ ಕಾಲೇಜಿನ ಆವರಣದಲ್ಲಿಯೂ ಇದೇ ರೀತಿ ವನ್ಯ ಸಂಕುಲಗಳ ಅನುಕೂಲಕ್ಕಾಗಿ, ಪರಿಸರದ ರಕ್ಷಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಮ್ಮ ಟ್ರಸ್ಟ್ ನಡೆಸುತ್ತಿರುವ ಕಾರ್ಯಕ್ಕೆ ನನ್ನ ಅಲ್ಪ ನೆರವಾಗಿ ಪ್ರಾಣಿಗಳಿಗೆ ನೀರಿನ ಅನುಕೂಲ ಕಲ್ಪಿಸಲು 50 ತೊಟ್ಟಿಗಳನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ನನ್ನ ಸಹಕಾರ ನಿರಂತರವಾಗಿರಲಿದೆ ಎಂದರು.
Kshetra Samachara
12/06/2022 06:31 pm