ವಿಶೇಷ ವರದಿ- ಗಣೇಶ್ ಹೆಗಡೆ
ಬೆಂಗಳೂರು: ನಂದಿನಿ ಬಡಾವಣೆಯ ಕೃಷ್ಣಾ ನಗರ ಮುಖ್ಯ ರಸ್ತೆಯಲ್ಲಿ ಇರುವ ಬಸ್ ನಿಲ್ದಾಣ ಹಲವು ವಿಶೇಷಗಳೊಂದಿಗೆ ಗಮನ ಸೆಳೆಯುತ್ತಿದೆ. ಪ್ರಾಚೀನ ಕಾಲದ ಗೋಪುರ, ದೊಡ್ಡ ಗಡಿಯಾರ ಹಾಗೂ ಹೊಯ್ಸಳ ಲಾಂಛನದೊಂದಿಗೆ ಆಕರ್ಷವಾಗಿ ಇರುವ ಬಿಎಂಟಿಸಿ ಬಸ್ ನಿಲ್ದಾಣದ ಒಳಹೊಕ್ಕರೆ ಕರ್ನಾಟಕ ರಾಜ್ಯದ ಮಾಹಿತಿಗಳನ್ನು ಒಳಗೊಂಡ ಸಣ್ಣ ಗ್ರಂಥಾಲಯವೇ ತೆರೆದುಕೊಳ್ಳುತ್ತದೆ.
ಬಿಬಿಎಂಪಿ ಮಾರಪ್ಪನಪಾಳ್ಯ ವಾರ್ಡ್ ನಂ44 ರ ವ್ಯಾಪ್ತಿಯ ಕೃಷ್ಣಾನಗರ ಸರ್ಕಲ್ ನಿಂದ ಕಂಠೀರವ ಸ್ಟುಡಿಯೋ ಕಡೆಗೆ ಹೋಗುವ ಮಾರ್ಗದಲ್ಲಿ ಈ ಬಸ್ ನಿಲ್ದಾಣ ಇದೆ.
ಕರ್ನಾಟಕ ರಾಜ್ಯದ ಇತಿಹಾಸವನ್ನು ಚಿತ್ರ ಸಹಿತ ಸಂಕ್ಷಿಪ್ತವಾಗಿ ಸಾರ್ವಜನಿಕರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ 9 ಸಾಹಿತಿಗಳ ಕಿರು ಪರಿಚಯ ಹಾಗೂ ಕೃತಿಯ ಬಗ್ಗೆ ಮಾಹಿತಿ ಇದೆ. ಕನ್ನಡ ನಾಡು ಕಂಡ ಧೀಮಂತ ವ್ಯಕ್ತಿಗಳು, ಶರಣರು, ದಾಸರು, ಪಂಪ ಕುಮಾರವ್ಯಾಸ ಸೇರಿದಂತೆ ಪ್ರಾಚೀನ ಕವಿಗಳ ಪರಿಚಯ ಇದೆ. ನಾಡಿನ ಸುಪ್ರಸಿದ್ಧ ತಾಣ, ಜೋಗ ಜಲಪಾತ, ದೇವಾಲಯ ಕನ್ನಡ ಚಿತ್ರರಂಗದ ಮಹನೀಯರ ಸಾಧನೆಗಳ ಕುರಿತ ಭಾವಚಿತ್ರಗಳು ಬಸ್ ನಿಲ್ದಾಣದಲ್ಲಿ ಪ್ರಚುರ ಪಡಿಸಲಾಗಿದೆ. ಒಟ್ಟಿನಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಗತವೈಭವದ ಮಾಹಿತಿ ಸಿಗಲಿದೆ.
PublicNext
06/05/2022 08:58 pm