ಬೆಂಗಳೂರು : ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬೇಗೂರು ವ್ಯಾಪ್ತಿಯ ಬೆರಟೇನ ಅಗ್ರಹಾರದ 3 ಬಡಾವಣೆಗಳ ನಿವಾಸಿಗಳು ಮಳೆ ನೀರಿನಿಂದ ಕಂಗಾಲಾಗಿದ್ದಾರೆ. ಹೌದು ಗಂಗಮ್ಮ ಬಡಾವಣೆ , ಆಶ್ರುತಿ ಬಡಾವಣೆ, ಚೌಡೇಶ್ವರಿ ಬಡಾವಣೆಯಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಬಡಾವಣೆ ಕೆರೆಯಾಗಿ ಮಾರ್ಪಾಡಾಗುತ್ತಿದೆ.
ಇನ್ನು ಬಡಾವಣೆಯ ಖಾಲಿ ನಿವೇಶನಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದು ಇದರಿಂದ ಬಡಾವಣೆಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಬಡಾವಣೆಗೆ ಹೊಂದಿಕೊಂಡಂತೆ ಇರುವ VRR ನೆಸ್ಟ್ ಅಪಾರ್ಟ್ ಮೆಂಟ್ ನವರು ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಅವ್ಯವಸ್ಥೆ ಉಂಟಾಗುತ್ತಿದೆ ಎಂದು ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಕಾರ್ಪೊರೇಟರ್ BJ ಅಂಜಿನಪ್ಪ ಬಡಾವಣೆ ನಿವಾಸಿಗಳ ಸಮಸ್ಯೆಯನ್ನ ಆಲಿಸಿದರು. ದಾಖಲಾತಿಗಳ ಪ್ರಕಾರ VRR ನೆಸ್ಟ್ ಅಪಾರ್ಟ್ ಮೆಂಟ್ ನಲ್ಲಿ 15 ಅಡಿಗಳ ರಾಜಕಾಲುವೆ ಇರುವುದು ಕಂಡು ಬರುತ್ತಿದ್ದು ರಾಜಕಾಲುವೆಯನ್ನ ಮುಚ್ಚಿ ಬಿಲ್ಡರ್ ಗಳು ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿದ್ದಾರೆ. ಈಗ ಮಳೆಗಾಲದಲ್ಲಿ ಬಡಾವಣೆಯ ನೀರು ರಾಜಕಾಲುವೆಯಲ್ಲಿ ಹರಿಯದೇ ಬಡಾವಣೆಯಲ್ಲಿ ನಿಲ್ಲುತ್ತಿದೆ. ಈ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ಬೇಜಾವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಮಾಜಿ ಕಾರ್ಪೊರೇಟರ್ ಅಂಜನಪ್ಪ ಆರೋಪಿಸಿದ್ದರು.
ಬಳಿಕ ಮಾತನಾಡಿದ ಬಡಾವಣೆ ನಿವಾಸಿ ಶೇಖರ್ ರೆಡ್ಡಿ ಅಪಾರ್ಟ್ಮೆಂಟ್ ನಲ್ಲಿ ಒಂದು ಚಿಕ್ಕ ರಂದ್ರ ಮಾಡಿ ನೀರನ್ನ ಬೇರೆ ಕಡೆ ಹರಿಸಲು ಅಪಾರ್ಟ್ ಮೆಂಟ್ ವಾಸಿಗಳು ಸುತರಾಂ ಒಪ್ಪುತ್ತಿಲ್ಲ. ಬಡಾವಣೆಯ ನಿವಾಸಿಗಳ ಅನ್ಯಾಯವನ್ನ ಕೇಳಲು ಹೋದರೆ ಪೊಲೀಸರನ್ನ ಕರೆಸಿ ಅವರಿಗೆ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ರೀತಿಯ ಸಮಸ್ಯೆ ಉಂಟಾಗುತ್ತಿದ್ದು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಶಾಸಕ ಎಂ ಕೃಷ್ಣಪ್ಪನವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಒತ್ತುವರಿಯಾಗುವ ರಾಜ ಕಾಲುವೆಯನ್ನು ತೆರವುಗೊಳಿಸಿ ಮಳೆ ನೀರು ಬಡಾವಣೆಯಲ್ಲಿ ಸರಾಗವಾಗಿ ಹರಿಯಲು ವ್ಯವಸ್ಥೆಯನ್ನ ಕಲ್ಪಿಸಿ ಕೊಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ. ಇಲ್ಲಿನ ಅವ್ಯವಸ್ಥೆ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಂ. ದಕ್ಷಿಣ ವ್ಯಾಪ್ತಿಯ ಕಾಂಗ್ರೆಸ್ ಮುಖಂಡ RK ರಮೇಶ್ ಬಡಾವಣೆ ನಿವಾಸಿಗಳ ಜೊತೆ ಸಮಾಲೋಚನೆ ನಡೆಸಿ ಕೂಡಲೇ ಇಲ್ಲಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಮುಂಬರುವ ದಿನಗಳಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಯನ್ನು ತೆರವುಗೊಳಿಸುವಂತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
PublicNext
08/08/2022 08:19 pm