ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕಾರ್ಯಾದೇಶವನ್ನು ಮುಂದಿನ 36 ಗಂಟೆಗಳಲ್ಲಿ ನೀಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಗಡುವು ನೀಡಿದೆ. ಅಲ್ಲದೆ, ಇನ್ನೂ ಯಾವ್ಯಾವ ನೆಪಗಳನ್ನು ಹೇಳುತ್ತೀರಿ, ಯಾರ ಮೇಲೆ ಹೊಣೆ ಹೊರಿಸುತ್ತೀರಿ ಎಂದು ಪಾಲಿಕೆಗೆ ಚಾಟಿ ಬೀಸಿದೆ. ರಾಜಧಾನಿ ಬೆಂಗಳೂರಿನ ರಸ್ತೆಗಳ ನಿರ್ವಹಣೆ ಸಂಬಂಧ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ನಡೆಸಿತು.
ಅಮೆರಿಕನ್ ರೋಡ್ ಟೆಕ್ನಾಲಜಿ ಅಂಡ್ ಸಲ್ಯೂಶನ್ಸ್ ಎಂಬ ಖಾಸಗಿ ಸಂಸ್ಥೆಯು ಈ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. ಕಾರ್ಯಾದೇಶ ಲಭ್ಯವಾಗದ ಕಾರಣ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೈಕೋರ್ಟ್‌ಗೆ ಹೇಳಿಕೊಂಡಿತ್ತು. ಈ ಸಂಸ್ಥೆಗೆ 36 ಗಂಟೆಗಳ ಒಳಗಾಗಿ ಕಾರ್ಯಾದೇಶ ನೀಡಬೇಕು. ಗುರುವಾರದ ಒಳಗಾಗಿ ಈ ಕುರಿತು ಬಿಬಿಎಂಪಿ ವರದಿಯನ್ನು ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರು ಮುಖ್ಯಸ್ಥರಾಗಿದ್ದ ವಿಭಾಗೀಯ ಪೀಠವು ಮಂಗಳವಾರ ನಿರ್ದೇಶನ ನೀಡಿದೆ.
ಕಂಪನಿಯು ಇನ್ನೂ ಕೆಲವು ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕಿರುವುದರಿಂದ ಕಾರ್ಯಾದೇಶ ನೀಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಬಿಬಿಎಂಪಿ ಪರ ವಕೀಲರು ಮನವಿ ಮಾಡಿದ್ದರು. ಆದರೆ, ತುರ್ತು ದುರಸ್ತಿ ಅಗತ್ಯವಿರುವ ರಸ್ತೆಗಳ ಸರ್ವೇ ಮುಗಿದಿದ್ದರೂ ಕಾರ್ಯಾದೇಶ ನೀಡುವಲ್ಲಿ ಆಗುತ್ತಿರುವ ವಿಳಂಬದ ಕುರಿತು ಮೌಖಿಕವಾಗಿ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿರುವ ಪೀಠವು, ಮಳೆಗಾಲಕ್ಕೂ ಮೊದಲು ಕಾಮಗಾರಿ ಮುಗಿಸುವಂತೆಯೂ ತಿಳಿಸಿದೆ.
Kshetra Samachara
21/04/2022 11:41 am