ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಕಸದ ಲಾರಿ ಸೇರಿದಂತೆ ಗೂಡ್ಸ್ ಗಾಡಿಗಳಿಂದ ಅಪಘಾತ ಹೆಚ್ಚಾಗುತ್ತಿದ್ದು, ಸಾವು- ನೋವುಗಳ ಸಂಖ್ಯೆ ಅಧಿಕವಾಗುತ್ತಿವೆ. ಇಂತಹ ದುರ್ಘಟನೆಗಳಿಗೆ ಕಡಿವಾಣ ಹಾಕಲು ಹಾಗೂ ಜಾಗೃತಿ ಮೂಡಿಸಲು ನಗರ ಸಂಚಾರ ಪೊಲೀಸರು ಇಂದು ಬೆಳ್ಳಂಬೆಳ್ಳಗೆ ವಿಶೇಷ ಅಭಿಯಾನ ಕೈಗೊಂಡಿದ್ದರು.
ನಗರ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರ ಸ್ಪೆಷಲ್ ಡ್ರೈವ್ ಮಾಡಿದರು. ಗೂಡ್ಸ್ ವಾಹನಗಳ ತಪಾಸಣೆ ನಡೆಸಿದರು. ಒಟ್ಟು 252 ವಾಹನಗಳ ಪರಿಶೀಲಿಸಿದರು. 258 ವಾಹನಗಳ ಪೈಕಿ 82 ವಾಹನಗಳು ಟ್ರಾಫಿಕ್ ನಿಯಮಗಳ ಉಲ್ಲಂಘಿರುವುದು ಕಂಡುಬಂತು. ನಂಬರ್ ಪ್ಲೇಟ್ ಸರಿಯಾಗಿಲ್ಲದಿರುವುದು, ಸಿಗ್ನಲ್ ಜಂಪ್, ಸೇರಿ ಹಲವು ನಿಯಮಗಳ ಉಲ್ಲಂಘನೆಗೆ ದಂಡ ಹಾಕಿದರು. ಕುಡಿದು ವಾಹನ ಚಲಾಯಿಸದಂತೆ ಎಚ್ಚರಿಸಿದರು.
ಈ ಬಗ್ಗೆ ಟ್ರಾಫಿಕ್ ಪೊಲೀಸ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಕಳೆದ ಕೆಲ ದಿನಗಳಿಂದ ಬಿಬಿಎಂಪಿ ಕಸ ವಿಲೇವಾರಿ ಲಾರಿಗಳಿಂದ ಅಪಘಾತವಾಗುತ್ತಿವೆ. ಸಾರ್ವಜನಿಕರಿಂದಲೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ನಿನ್ನೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಹಾಗೂ ಅವರ ಸಹಕಾರದೊಂದಿಗೆ ಇಂದು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಫಿಟ್ನೆಸ್ ಸರ್ಟಿಫೀಕೇಟ್, ಲೈಸೆನ್ಸ್ ಇರದ 9 ವಾಹನಗಳನ್ನು ಅಮಾನತ್ತು ಮಾಡಲಾಗಿದೆ. ಪಶ್ಚಿಮ ವಿಭಾಗದಲ್ಲಿ ತಪಾಸಣೆ ಮಾಡಲಾದ 258 ವಾಹನಗಳ ಪೈಕಿ ಮೂರು ವಾಹನ ಜಪ್ತಿ ಮಾಡಿಕೊಂಡರೆ
82 ಪ್ರಕರಣ ದಾಖಲಾಗಿವೆ. ಅದೇ ರೀತಿ ಉತ್ತರ ವಿಭಾಗದಲ್ಲಿ 41 ವಾಹನ ತಪಾಸಣೆ ಮಾಡಿ 4 ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪೂರ್ವ ವಿಭಾಗದಲ್ಲಿ 353 ವಾಹನಗಳನ್ನ ಚೆಕ್ ಮಾಡಿ 25 ಪ್ರಕರಣಗಳನ್ನ ದಾಖಲಿಸಲಾಗಿದೆ. ಒಟ್ಟು 652 ವಾಹನಗಳ ತಪಾಸಣೆ, 9 ವಾಹನಗಳು ಜಪ್ತಿ ಮಾಡಿಕೊಂಡಿದ್ದು 307 ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅದೇ ರೀತಿ ಮದ್ಯಪಾನ ಮಾಡಿದ್ದ ಆರೋಪದಡಿ 1 ವಾಹನ ವಶಪಡಿಸಿಕೊಳ್ಳಲಾಗಿದೆ. ಕಸ ವಿಲೇವಾರಿ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಲು ಸಲಹೆ ನೀಡಲಾಗಿದೆ ಎಂದರು.
PublicNext
20/04/2022 04:43 pm