ಬೆಂಗಳೂರು: ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಜನ ಪರಿಪಾಟಲು ಬೀಳುವಂತಾಗಿದೆ. ಇದನ್ನ ಕಣ್ಣಾರೆ ಕಂಡ ಇದೀಗ ವಿಧಾನಸೌಧ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಶೌಚಾಲಯಕ್ಕಾಗಿ ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಮಿನಿ ಮೆಜೆಸ್ಟಿಕ್ ಅಂತಲೇ ಕರೆಯಿಸಿಕೊಳ್ಳುವ ಇಲ್ಲಿ ನಿತ್ಯ ಸಾವಿರಾರು ಜನ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಪ್ರಯಾಣ ಮಾಡ್ತಾರೆ. ಹೆಚ್ಚು ಜನದಟ್ಟಣೆ ಇರೋ ಈ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಅನ್ನೋದು ಮರೀಚಿಕೆಯಾಗಿದ್ದು, ಇದರಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. .
ವಿಧಾನಸೌಧ ಭದ್ರತೆ ಸಬ್ ಇನ್ಸ್‌ಪೆಕ್ಟರ್ ಆಗಿರೋ ಶಾಂತಪ್ಪ ತನ್ನ ತಾಯಿ ಜೊತೆ ಊರಿಗೆ ಹೊರಟಿದ್ರು. ಈ ವೇಳೆ ತನ್ನ ತಾಯಿ ಸಹ ಶೌಚಾಲಯಕ್ಕೆ ಹೋಗಲು ಸಮಸ್ಯೆ ಎದುರಿಸಿದ್ದರಂತೆ. ಇದರಿಂದ ಬೇಸತ್ತ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಗೊರಗುಂಟೆಪಾಳ್ಯ ಬಳಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾಡಲು ಕೋರಿ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಫೆಬ್ರವರಿ 4 ರಂದು ಶುರುವಾದ ಈ ಅಭಿಯಾನ ಇಲ್ಲಿವರೆಗೆ 48 ದಿನ ಪೂರೈಸಿದೆ. ಟ್ವಿಟರ್ ನಲ್ಲಿ ಸಚಿವ ಮುನಿರತ್ನ, ಸೋಮಶೇಖರ್, ಬಿಬಿಎಂಪಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಸೋಷಿಯಲ್ ಅಭಿಯಾನ ನಡೆಸಿದ್ದು, ಇದಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಇನ್ನೂ ಈ ಶೌಚಾಲಯ ಸಮಸ್ಯೆ ಬಗ್ಗೆ ಮಾತನಾಡಿದ ಸ್ಥಳೀಯರು, ನಿತ್ಯ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಅದ್ರೆ ಶೌಚಾಲಯ ಇಲ್ಲದ ಪರಿಣಾಮ ಮಹಿಳೆಯರು, ಮಕ್ಕಳು, ವೃದ್ಧರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಗೊರಗುಂಟೆಪಾಳ್ಯ ಬಸ್ ನಿಲ್ದಾಣ ಬಳಿ ಈ ಹಿಂದೆ ಒಂದು ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದ್ದು, ಅದು ಅರ್ಧಕ್ಕೆ ನಿಂತಿದೆ. ಜನ ರಾತ್ರಿ ವೇಳೆ ಪ್ರಕೃತಿ ಕರೆ ವೇಳೆ ಪರದಾಡುತ್ತಿದ್ದಾರೆ ಇಲ್ಲಿ ಉತ್ತಮ ಶೌಚಾಲಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಇನ್ನೂ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಅವರ ಈ ಸಾಮಾಜಿಕ ಕಳಕಳಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಅಥವಾ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮವಹಿಸಿ ಶೌಚಾಲಯ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲ ಅಗುತ್ತೆ ಅನ್ನೋದು ಎಲ್ಲರ ಮಾತು.
Kshetra Samachara
20/04/2022 03:10 pm