ವರದಿ-ಗಣೇಶ್ ಹೆಗಡೆ
ಬೆಂಗಳೂರು: ಸಿಲಿಕಾನ್ ಸಿಟಿಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಸ್ವಚ್ಛವಾಗಿರಬೇಕಿದ್ದ ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಜಲ್ಲಿ, ಮರಳು, ಇಟ್ಟಿಗೆ ರಾಶಿ ಬಿದ್ದಿದೆ. ಅರೆಬರೆ ಕೆಲಸದಿಂದ ಇಡೀ ಆಸ್ಪತ್ರೆಯ ವಾತಾವರಣವೇ ರೋಗಗ್ರಸ್ತವಾಗಿದೆ.
ಆಸ್ಪತ್ರೆಗೆ ಪ್ರತಿದಿನ ಬಾಣಂತಿಯರು, ಗರ್ಭಿಣಿಯರು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ರೋಗಿಗಳು ಭೇಟಿ ನೀಡುತ್ತಾರೆ.
ಸ್ಮಾರ್ಟ್‌ಸಿಟಿ ಕಾಮಗಾರಿಯಿಂದ ರೋಗಿಗಳ ಜತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆಂಬ್ಯುಲೆನ್ಸ್‌ಗಳ ಓಡಾಟಕ್ಕೂ, ಸ್ಟ್ರೆಚರ್ ಗಳ ಸಾಗಾಟಕ್ಕೂ ಸಮಸ್ಯೆ ಆಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸುಸಜ್ಜಿತ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಪಾರ್ಕಿಂಗ್ ವ್ಯವಸ್ಥೆ, ಫುಟ್‌ಪಾತ್ ಅಭಿವೃದ್ಧಿ, ಪ್ರವೇಶ ದ್ವಾರ ಮತ್ತು ಟ್ರಸ್ಟ್ ನಿರ್ಮಾಣ, ಬೀದಿದೀಪ ಅಳವಡಿಸಲು ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ 10.65 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಪ್ರಸ್ತುತ ಫುಟ್‌ಪಾತ್ ಕಾಬೂಲ್ ಸ್ಟೋನ್ ಹಾಕುವ ಕೆಲಸ ನಡೆಯುತ್ತಿದೆ, ವಾಣಿ ವಿಲಾಸ ಆಸ್ಪತ್ರೆ ಎದುರಿನ ರಸ್ತೆ ಕಾಮಗಾರಿ ಕೆಲಸವೇ ಆರಂಭವಾಗಿಲ್ಲ. ವಾಹನ ನಿಲುಗಡೆ ಸ್ಥಳದಲ್ಲೂ ಕಾಬೂಲ್ ಸ್ಟೋನ್ ಹಾಕುವುದು ಬಾಕಿ ಇದೆ. ವಿಕ್ಟೋರಿಯಾ ದಂತ ಆಸ್ಪತ್ರೆಯ ಎದುರಿನ ರಸ್ತೆ ಕಾಮಗಾರಿ ಕೂಡ ಹಾಗೆಯೇ ಉಳಿದಿದೆ. ವಿದ್ಯುತ್ ದೀಪವನ್ನು ಎಲ್ಲೂ ಅಳವಡಿಸಿಲ್ಲ.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಮುಂದಿನ ಒಂದು ವಾರದೊಳಗೆ ಮುಕ್ತಾಯಗೊಳಿಸುವಂತೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಮುಖ್ಯಸ್ಥರಿಗೆ ಬಿಬಿಎಂಪಿ ಸೂಚನೆ ನೀಡಿದೆ.
Kshetra Samachara
18/12/2021 08:03 am