ವರದಿ - ಗಣೇಶ್ ಹೆಗಡೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ನಮ್ಮ ಕ್ಲಿನಿಕ್ ರಾಜಧಾನಿಯಲ್ಲಿ ಲೋಕಾರ್ಪಣೆಗೊಂಡಿದೆ.
ಸಿಎಂ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಜುಲೈ 28ರಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಾದ ಮಲ್ಲೇಶ್ವರ ಮತ್ತು ಪದ್ಮನಾಭನಗರ ವಾರ್ಡ್‌ನಲ್ಲಿ ಸಾಂಕೇತಿಕವಾಗಿ ನಮ್ಮ ಕ್ಲಿನಿಕ್ ಕಾರ್ಯಾರಂಭಗೊಂಡಿದೆ.
ಬೆಂಗಳೂರಿನ ಎಲ್ಲ 243 ವಾರ್ಡ್ ಸೇರಿದಂತೆ ರಾಜ್ಯದ ಒಟ್ಟು 438 ಕಡೆ ನಮ್ಮ ಕ್ಲಿನಿಕ್ ಆರಂಭಿಸುವುದಾಗಿ ಮುಖ್ಯ ಮಂತ್ರಿಗಳು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಪ್ರಾಯೋಗಿಕವಾಗಿ ನಗರದ ಈ ಎರಡು ತಾಣಗಳಲ್ಲಿ ಕ್ಲಿನಿಕ್ ಆರಂಭವಾಗಿದೆ.
ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4:30 ಗಂಟೆವರೆಗೆ ಕಾರ್ಯಾನಿರ್ವಹಿಸುತ್ತಿದ್ದು, ಒಬ್ಬ ಡಾಕ್ಟರ್, ಒಬ್ಬ ನರ್ಸ್, ಒಬ್ಬ ಲ್ಯಾಬ್ ಟೆಕ್ನಿಷಿಯನ್ ಹಾಗೂ ಒಬ್ಬ ಡಿ ಗ್ರೂಪ್ ಸಿಬ್ಬಂದಿ ಮಾತ್ರ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಉಚಿತ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಮಾಡಲಾಗುತ್ತದೆ. ಒಟ್ಟು 12 ತರಹದ ಆರೋಗ್ಯ ಸೇವೆಗಳು ಹಾಗೂ 14 ವಿಧದ ಪ್ರಯೋಗ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಸೇವೆ ಅಗತ್ಯವಿದ್ದರೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸಲಿಂಗ್ ಮೂಲಕ ಕೊಡಿಸುವ ವ್ಯವಸ್ಥೆ ಈ ಕ್ಲಿನಿಕ್‌ಗಳಲ್ಲಿ ಇರಲಿದೆ.
ರಾಜ್ಯ ಸರ್ಕಾರದ ಅನುದಾನದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದ್ದು, ಪ್ರತಿ ಕ್ಲಿನಿಕ್‌ಗೆ ವಾರ್ಷಿಕ 36 ಲಕ್ಷ ರೂ. ನೀಡಲಾಗುತ್ತದೆ. ಈ ಮೊತ್ತದಲ್ಲಿ ಸಿಬ್ಬಂದಿ ವೇತನ, ಕ್ಲಿನಿಕ್ ನಿರ್ವಹಣೆ, ಖಾಸಗಿ ಕಟ್ಟಡವಾಗಿದ್ದರೆ ಬಾಡಿಗೆ ಸೇರಿದಂತೆ ಎಲ್ಲವನ್ನೂ ನಿರ್ವಹಣೆ ಮಾಡಬೇಕಾಗಲಿದೆ.
PublicNext
02/08/2022 05:14 pm