ಬೆಂಗಳೂರು: ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ 'ಫಲಪುಷ್ಪ ಪ್ರದರ್ಶನಕ್ಕೆ' ಶನಿವಾರ ಭಾನುವಾರ ಹೆಚ್ಚು ಜನ ಆಗಮಿಸುವ ಸಾಧ್ಯತೆ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ದಿನ ಮೆಟ್ರೋ ರೈಲು ಸಂಚಾರಕ್ಕೆ ಪೇಪರ್ ಟಿಕೆಟ್ ವಿತರಿಸಲಾಗುವದು ಎಂದು ನಮ್ಮ ಮೆಟ್ರೋ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಶನಿವಾರದಿಂದ ಸೋಮವಾರದವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಬೇರೆ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಹೋಗುವ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಟೋಕನ್, ಸ್ಮಾರ್ಟ್‌ಕಾರ್ಡ್ ಜೊತೆಗೆ ಪೇಪರ್ ಟಿಕೆಟ್ ನೀಡಲಿದ್ದೇವೆ ಎಂದು ಹೇಳಿದೆ.
ಲಾಲ್‌ಬಾಗ್‌ಗೆ ಭೇಟಿ ನೀಡಿದ ಬಳಿಕ ಪ್ರಯಾಣಿಕರು ಮರಳಿ ತಮ್ಮ ಸ್ಥಳಗಳಿಗೆ ತೆರಳುವಾಗ ಪೇಪರ್ ಟಿಕೆಟ್ ಖರೀದಿಸಬಹುದು. ಇತರ ನಿಲ್ದಾಣಗಳಿಂದ ನಿರ್ಗಮಿಸುವಾಗ ಹಾಜರುಪಡಿಸಬೇಕು. ಮೂರು ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ಗಂಟೆವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಬೇರಾವುದೇ ನಿಲ್ದಾಣಕ್ಕೆ ತೆರಳಲು ಟಿಕೆಟ್ ದರವನ್ನು 30 ರೂ ನಿಗದಿ ಮಾಡಲಾಗಿದೆ. ಈ ದಿನಗಳಲ್ಲಿ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಾತ್ರ ರಾತ್ರಿ 8 ಗಂಟೆವರೆಗೆ, ಬೇರೆ ನಿಲ್ದಾಣಗಳಲ್ಲಿ ಬೆಳಗ್ಗೆ 8ಗಂಟೆಯಿಂದ ಸಂಜೆ 6ಗಂಟೆವರೆಗೆ ಪೇಪರ್ ಟಿಕೆಟ್ ನೀಡಲಾಗುವುದು ಎಂದು ಮಾಹಿತಿ ನೀಡಿದೆ.
ಎಂದಿನಂತೆ ಪ್ರಯಾಣದ ಅವಕಾಶ:
ಬೇರೆ ಮೆಟ್ರೋ ನಿಲ್ದಾಣದಿಂದ ಲಾಲ್‌ಬಾಗ್ ಉದ್ಯಾನಕ್ಕೆ ಬರುವವರು ಹೋಗುವವರು ಮೊದಲಿನಂತೆ ಟೋಕನ್, ಸ್ಮಾರ್ಟ್‌ಕಾರ್ಡ್ ಬಳಸುವ ಅವಕಾಶವಿದೆ. ಸ್ಮಾರ್ಟ್‌ಕಾರ್ಡ್ ರಿಯಾಯಿತಿ ಕೂಡ ಎಂದಿನಂತೆ ಇರಲಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ತಿಳಿಸಿದೆ.
Kshetra Samachara
12/08/2022 01:52 pm