ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಂಬಂಧ ಹತ್ತಕ್ಕೂ ಅಧಿಕ
ಟ್ರಾಫಿಕ್ ಸಾಂದ್ರತೆ ಜಾಗಗಳ ಗುರುತು ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಾರ ಮೂರು ಜಾಗಗಳಿಗೆ ಭೇಟಿ ನೀಡಲಾಗಿದೆ. ಅದರಲ್ಲಿ ಗೊರಗುಂಟೇಪಾಳ್ಯ, ಹೆಬ್ಬಾಳ, ಕೆಆರ್ ಪುರ ಮುಖ್ಯವಾಗಿದೆ ಎಂದರು.
ನಿನ್ನೆ ರಾತ್ರಿ ಸಿಂಧೂರ ರಸ್ತೆ ಕಡೆಯಿಂದ ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ರಸ್ತೆ ನಾಮಫಲಕ, ಬೆಸ್ಕಾಂ ಅಳವಡಿಸಿರುವ ಕಾಂಕ್ರೀಟ್ ಹಾಗೂ ಝೀರೋ ಟಾಲರೆನ್ಸ್ ಬೋರ್ಡ್‌ನ್ನು ಸ್ಥಳಾಂತರಿಸಿ ಪಾದಚಾರಿ ಮಾರ್ಗ ಸರಿಪಡಿಸಿ ಎಡಭಾಗಕ್ಕೆ ಹೋಗುವ ವಾಹನಗಳಿಗೆ ಸುಗಮವಾಗಿ ಚಲಿಸಲು ಅವಕಾಶ ಕಲ್ಪಿಸಬೇಕಾಗಿದೆ.
ಬಿಎಂಆರ್ ಸಿ ಎಲ್ ಫಿಲ್ಲರ್‌ಗೆ ಅಳವಡಿಸಿರುವ ಸಿಗ್ನಲ್ ಲೈಟ್ ಎತ್ತರವನ್ನು ಇನ್ನೂ 3 ಅಡಿ ಎತ್ತರಿಸಬೇಕಿದೆ. ಸಾರಕ್ಕಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ಜೆ.ಪಿ.ನಗರ ಮೆಟ್ರೋ ನಿಲ್ದಾಣದ 14ನೇ ಇ ರಸ್ತೆಯಿಂದ ವಾಹನಗಳು ಪಾದಚಾರಿ ಮಾರ್ಗ ಮುಖೇನ ಕನಕಪುರ ರಸ್ತೆಗೆ ವೇಗವಾಗಿ ಬರುವುದರಿಂದ ಅಪಘಾತ ಉಂಟಾಗುತ್ತಿವೆ ಎಂದರು.
ಜಯದೇವ ಮೇಲುಸೇತುವೆ ಈಸ್ಟ್ ಎಂಡ್ ಮುಖ್ಯ ರಸ್ತೆ ಕಡೆಗೆ ರೋಡ್ ಸರ್ಪೇಸಿಂಗ್ ಸರಿಪಡಿಸುವ, ವಿದ್ಯುತ್ ದೀಪ ಅಳವಡಿಸುವ, ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ಆಗುತ್ತಿದೆ. ಅದಕ್ಕಾಗಿ ಡ್ರೈನೇಜ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮೆಟ್ರೊ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮೆಟ್ರೋದಿಂದ ರಸ್ತೆ ದುರಸ್ತಿ ಕೈಗೊಳ್ಳಬೇಕಿದ್ದು, ಕೂಡಲೇ ಅದನ್ನು ಮಾಡಬೇಕು. ಸರ್ವೀಸ್ ರಸ್ತೆ ಬದಿ ಕಟ್ಟಡ ಭಗ್ನಾವಶೇಷ ಹಾಕಿದ್ದು, ತೆರವುಗೊಳಿಸಲು ಹೇಳಲಾಗಿದೆ ಎಂದರು.
ಬಿಟಿಎಂ ಲೇಔಟ್ - ಸಿಲ್ಕ್ ಬೋರ್ಡ್ ಕಡೆಗೆ ಎರಡೂ ಬದಿ ಚರಂಡಿ ಹಾಳಾಗಿರುವುದರಿಂದ ಮಳೆ ಬಂದಾಗ ಚರಂಡಿ ನೀರು ಮತ್ತು ಮಳೆನೀರು ಒಟ್ಟಾಗಿ ಸೇರಿ ರಾಜಕಾಲುವೆಯಿಂದ ಉಕ್ಕಿ ಹರಿಯುವುದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದ್ದು, ರಾಜಕಾಲುವೆ ವಿಭಾಗದಿಂದ ತಕ್ಷಣ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ನಿವಾರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
PublicNext
06/07/2022 08:20 pm