ಬೆಂಗಳೂರು: ದೇಶದ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಬೈಯ್ಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಿಂದ ಟ್ರೈನ್ ಸಂಚಾರ ಆರಂಭವಾಗಿದೆ.
ಸೋಮವಾರ ಸಂಜೆ 7ಕ್ಕೆ ಹೊರಡುವ ಬಾಣಸವಾಡಿ-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸರ್.ಎಂ .ವಿಶ್ವೇಶ್ವರಯ್ಯ ರೈಲು ನಿಲ್ದಾಣ ಮೊದಲು ಪ್ರಯಾಣ ಆರಂಭಿಸಿತು. ರೈಲು ಸಂಖ್ಯೆ 12684 ರೈಲು ನೂತನ ಟರ್ಮಿನಲ್ ಒಂದನೇ ಪ್ಲಾಟ್ ಫಾರಂನಿಂದ ಸುಮಾರು 23 ಭೋಗಿಗಳ ಉದ್ದದ ರೈಲನ್ನು ಲೋಕೋ ಪೈಲಟ್ ಕಾರ್ತಿಗೆಯನ್ ಚಾಲನೆ ಮಾಡಿದರು.
ಈ ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸರ್.ಎಂ .ವಿಶ್ವೇಶ್ವರಯ್ಯ ರೈಲು ನಿಲ್ದಾಣ ಮೂಲಕ ಕೆ.ಆರ್.ಪುರ, ಬಂಗಾರ ಪೇಟೆ, ಈರೋಡ್ , ತಿರುಪತ್ತೂರು, ಸೇಲಂ ,ಜಂಕ್ಷನ್, ಪಾಲಕಾಡ್ ಮೂಲಕ ಎರ್ನಾಕುಲಂ ತಲುಪಲಿದೆ. ರೈಲು ಓಡಾಟ ಆರಂಭವಾಗುತ್ತಿರುವ ಹಿನ್ನೆಲೆ ಇಂದಿನಿಂದಲೇ ಟಿಕೆಟ್ ಕೌಂಟರ್, ಲಿಫ್ಟ್, ಆಹಾರ ಮಳಿಗೆಗಳು, ಪಾರ್ಕಿಂಗ್, ಬಿಎಂಟಿಸಿ ಬಸ್ ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಆರಂಭಗೊಂಡಿವೆ.
ಹೊರನೋಟಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೋಲುವ ಈ ಟರ್ಮಿನಲ್, ಹವಾನಿಯಂತ್ರಿತ ವ್ಯವಸ್ಥೆ, ಫ್ಲಾಟ್ ಫಾರ್ಮ್‌ಗಳು, ವಿಶ್ರಾಂತಿ ಕೊಠಡಿ, ಶೌಚಾಲಯ, ಬಸ್ ಬೇ, ವಿಶಾಲವಾದ ವಾಹನ ನಿಲುಗಡೆ ಸ್ಥಳ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿನ ಸೌಲಭ್ಯಗಳು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವ ನೀಡಿದೆ.
ಬೆಂಗಳೂರು ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ನಗರದ 3ನೇ ಕೋಚಿಂಗ್ ಟರ್ಮಿನಲ್ ಇದಾಗಿದೆ. ಈ ನೂತನ ಟರ್ಮಿನಲ್ ಆರಂಭದಿಂದ ಪ್ರಮುಖ ಎರಡು ರೈಲು ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಬಹುದಾಗಿದೆ. 314 ಕೋಟಿ ರೂ. ವೆಚ್ಚದಲ್ಲಿ ಬೈಯ್ಯಪ್ಪನಹಳ್ಳಿಯಲ್ಲಿ ವಿಮಾನ ನಿಲ್ದಾಣ ಮಾದರಿಯ ಅತ್ಯಾಧುನಿಕ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಈ ನಿಲ್ದಾಣದಲ್ಲಿ ವೇಳಾಪಟ್ಟಿಯಂತೆ ಟರ್ಮಿನಲ್‌ನಲ್ಲಿ ವಾರದಲ್ಲಿ ಮೂರು ರೈಲುಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ನೈರುತ್ಯ ರೈಲ್ವೆ ಸುಮಾರು 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೂಲಕ ಬೆಂಗಳೂರಿನ ಭವ್ಯ ಸಾಲಿಗೆ ಮತ್ತೊಂದು ಸೇರ್ಪಡೆಯಾಗಲಿದೆ.
4,200 ಚದರ ಮೀಟರ್ ವಿಸ್ತೀರ್ಣದ ಈ ರೈಲು ನಿಲ್ದಾಣದಲ್ಲಿ ಡಿಜಿಟಲ್ ಮೂಲಕ ರೈಲು ಸಂಚಾರದ ರಿಯಲ್ ಟೈಂ ಮಾಹಿತಿ ಪ್ರಯಾಣಿಕರಿಗೆ ಸಿಗಲಿದೆ. 4 ಲಕ್ಷ ಲೀಟರ್ ನೀರಿನ ಮರುಬಳಕೆ ಘಟಕ, ವಿಐಪಿ ಲಾಂಜ್, ಫುಡ್‌ಕೋರ್ಟ್, 250 ನಾಲ್ಕು ಚಕ್ರ, 900 ಬೈಕ್‌ಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ. 7 ಫ್ಲಾಟ್‌ಫಾರಂಗಳನ್ನು ನಿಲ್ದಾಣ ಹೊಂದಿದೆ. ನಿಲ್ದಾಣದಿಂದ 50 ಜೋಡಿ ರೈಲುಗಳನ್ನು ಓಡಿಸಲು ಇಲಾಖೆ ಗುರಿ ಹೊಂದಿದೆ.
PublicNext
07/06/2022 01:54 pm