ವಿಶೇಷ ವರದಿ: ಗಣೇಶ್ ಹೆಗಡೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಕಡಿಮೆ ಮಾಡಲು ಬಿಬಿಎಂಪಿ ಸ್ಮಾರ್ಟ್ ಪಾರ್ಕಿಂಗ್ ಮಷಿನ್ ಗಳನ್ನಿಟ್ಟಿತ್ತು. ಅದಕ್ಕೆ ಗಂಟೆಗೆ ಇಂತಿಷ್ಟು ಅಂತ ಚಾರ್ಜ್ ಮಾಡಲಾಗುತ್ತಿತ್ತು. ಈ ಸಂಬಂಧ ಖಾಸಗಿ ಕಂಪನಿಗೆ ಗುತ್ತಿಗೆಯನ್ನು ಎರಡು ವರ್ಷಗಳ ಹಿಂದೆ ಬಿಬಿಎಂಪಿ ನೀಡಿತ್ತು. ಆದರೆ ನಿರ್ವಹಣೆ ಕೊರತೆ ಹಾಗೂ ಆರ್ಥಿಕ ಹೊರೆಯಿಂದಾಗಿ ಸ್ಮಾರ್ಟ್ ಪಾರ್ಕಿಂಗ್ ಮೆಷಿನ್ ತುಕ್ಕು ಹಿಡಿಯುತ್ತಿದೆ.
ಹೌದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೋಟಿ, ಕೋಟಿ ಆದಾಯದ ಮೂಲವಾಗಿದ್ದ ಸ್ಮಾರ್ಟ್ ಪಾರ್ಕಿಂಗ್ ಮೆಷಿನ್ ಸಿಲಿಕಾನ್ ಸಿಟಿಯ ಜನತೆ ಬಳಕೆ ಮಾಡುತ್ತಿಲ್ಲ. ಕನ್ನಿಂಗ್ ಹ್ಯಾಮ್ ರೋಡ್, ಎಂ.ಜಿ.ರೋಡ್, ಕಸ್ತೂರಬಾ ರಸ್ತೆ ಸೇರಿದಂತೆ 10 ಕಡೆಯಲ್ಲಿ ಸಾರ್ಟ್ ಪಾರ್ಕಿಂಗ್ ಮೆಷಿನ್ ಬಳಕೆ ಜಾರಿಗೆ ಬಂದಿತ್ತು.
ತಂತ್ರಾಂಶದ ಮೂಲಕ ಪಾರ್ಕಿಂಗ್ ಮಾಡಿ ಪಾರ್ಕಿಂಗ್ ಮೀಟರ್ ಮೂಲಕ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಿ ರಶೀದಿ ಪಡೆಯಬಹುದಾಗಿದೆ. ಪಾಲಿಕೆಯಿಂದ ಯಾವುದೇ ಹಣ ವ್ಯಯಿಸದೆ ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಇದರಿಂದ ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ಆದಾಯ ನೀರಿಕ್ಷೆ ಮಾಡಲಾಗಿತ್ತು.
ಖಾಸಗಿ ಸಹಭಾಗಿತ್ವದಲ್ಲಿ ಸೆಂಟ್ರಲ್ ಪಾರ್ಕಿಂಗ್ ಸರ್ವೀಸಸ್ ಸಂಸ್ಥೆ ಮೂಲಕ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸಿದ್ದು, ಆ ಸಂಸ್ಥೆಯೇ ನಿರ್ವಹಣೆ ಮಾಡುತ್ತಿತ್ತು. ಪಾಲಿಕೆಯಿಂದ ಇದಕ್ಕೆ ಯಾವುದೇ ಹಣ ವ್ಯಯಿಸುತ್ತಿಲ್ಲ. ನಮ್ಮ ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ (NBSP) ತಂತ್ರಾಂಶ ಅಭಿವೃದ್ಧಿಪಡಿಸಿದೆ. ವಾಹವನ್ನು ಪಾರ್ಕಿಂಗ್ ಮಾಡಿ ಪಾರ್ಕಿಂಗ್ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಸ್ವಯಂಚಾಲಿತ ಡಿಜಿಟಲ್ ಪಾರ್ಕಿಂಗ್ ಮೀಟರ್ ಮೂಲಕ ಪಾರ್ಕಿಂಗ್ ಶುಲ್ಕ ಪಾವತಿಸಿ ರಸೀದಿ ಪಡೆಯಬಹುದಾಗಿತ್ತು.
ವಾಹನ ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಯುಪಿಐನಿಂದ ಹಣ ಪಾವತಿಸಬಹುದಾಗಿದೆ. ವಾಹನ ನಿಲುಗಡೆ ಸ್ಥಳದಲ್ಲಿ ಸೆನ್ಸಾರ್‌ಗಳ ಅಳವಡಿಕೆ, ಎಷ್ಟು ವಾಹನಗಳು ನಿಂತಿವೆ ಎನ್ನುವ ತಿಳಿಯುವ ವ್ಯವಸ್ಥೆ ಇದೆ. ಇನ್ನು ಎಂ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ಹೊಣೆ ಹೊತ್ತ ಕಂಪನಿ ಸಾಲ ಮರು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಸಾಲ ಕೊಟ್ಟ ಸಂಸ್ಥೆ ಟಿಕೆಟ್ ಮೆಷಿನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. 1.34 ಕೋಟಿ ರೂ. ಸಾಲ ಬಾಕಿ ಪಾವತಿಸುವವರೆಗೂ ಯಾವುದೇ ಟಿಕೆಟ್ ಮೆಷಿನ್ ಬಳಕೆ ಮಾಡಬಾರದೆಂದು ಸಾಲ ನೀಡಿದ ಸಂಸ್ಥೆ ನೋಟೀಸ್ ನೀಡಿದೆ.
Kshetra Samachara
17/05/2022 10:29 am