ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಚೀಫ್ ಕಮಿಷನರ್ ಪುಲ್ ಅಲರ್ಟ್ - ಸಿಟಿ ರೌಂಡ್ಸ್ ನಲ್ಲಿ ಬ್ಯೂಸಿ

ಬೆಂಗಳೂರು -ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ರೌಂಡ್ಸ್ ಹಾಕಿ ಪರಿಶೀಲನೆ ನಡೆಸಿದರು.

ಮನೋರಾಯನ ಪಾಳ್ಯ ಆರ್.ಟಿ.ನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿ ಮಾತನಾಡಿ, ಹಾಜರಾತಿ ಪರಿಶೀಲನೆ ನಡೆಸಿ ಗೈರು ಹಾಜರಾದ ಪೌರಕಾರ್ಮಿಕರಿಗೆ ಕಡ್ಡಾಯ ಆರೋಗ್ಯ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಪೌರ ಕಾರ್ಮಿಕರೊಟ್ಟಿಗೆ ಚಹಾ ಸೇವಿಸಿದರು.

ಜೆ.ಸಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿದಾಗ 13 ಆಟೋ ಗಳಲ್ಲಿ 12 ವಾಹನಗಳು ಮಾತ್ರ ಹಾಜರಿದ್ದವು. ಜೊತೆಗೆ ಜಿಪಿಎಸ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದನ್ನು ಗಮನಿಸಿ ಅದನ್ನು ಸರಿಪಡಿಸಿಕೊಂಡು ಪ್ರತಿ ನಿತ್ಯ ಸದರಿ ವಾಹನಗಳು ಚಲಿಸುವ ಬಗ್ಗೆ ನಿಗಾವಹಿಸಬೇಕು ಹಾಗೂ ಪ್ರತಿ ನಿತ್ಯ ವರದಿಯನ್ನು ನೀಡಲು ತಿಳಿಸಿದರು.

ಜಿಪಿಎಸ್ ವ್ಯವಸ್ಥೆ ನಿರ್ವಹಣೆಯನ್ನು ಸರಿಪಡಿಸಿ ನಿಯಂತ್ರಣ ಕೊಠಡಿ ಮೂಲಕ ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್ ಗಳ ಮೇಲೆ ಮೇಲ್ವಿಚಾರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವೇಗೌಡ ಮುಖ್ಯ ರಸ್ತೆಯಲ್ಲಿ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ) ಪರಿಶೀಲನೆ,ಮುನಿರೆಡ್ಡಿ ಪಾಳ್ಯದ ಬಿಬಿಎಂಪಿಯ ಹೆರಿಗೆ ಆಸ್ಪತ್ರೆಯ ಸುತ್ತಮುತ್ತಲಿನ ರಸ್ತೆ ಬದಿಯ ಶೋಲ್ಡರ್ ಡ್ರೈನ್‌ಗಳು ಸ್ವಚ್ಛವಾಗಿರದೇ ಇರುವುದನ್ನು ಗಮನಿಸಿ, ಕೂಡಲೆ ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳನ್ನು ಸ್ವಚ್ಛಗೊಳಿಸಬೇಕು. ಜೊತೆಗೆ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳೆತ್ತಲು ವಾರ್ಷಿಕ ನಿರ್ವಹಣಾ ಗುತ್ತಿಗೆ ನೀಡಿದ್ದು, ಆ ಪ್ರಕ್ರಿಯೆಯು ಸಕ್ರಿಯವಾಗಿ ನಡೆದು ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದುಹೋಗಲು ಅನುವಾಗುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಪೌರ ಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಪರಿಶೀಲಿಸಿ, ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಇಲ್ಲದಿರುವುದನ್ನು ಕಂಡು ಕೂಡಲೆ ಆಸ್ಪತ್ರೆ ಆವರಣದಲ್ಲಿ ವಿಶ್ರಾಂತಿ ಕೊಠಡಿ(ಸುವಿಧಾ ಕ್ಯಾಬಿನ್)ಯನ್ನು 7 ದಿನದೊಳಗಾಗಿ ಸ್ಥಾಪಿಸಲು ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್‌ಗೆ ಸೂಚಿಸಿದರು.

ಮುನಿರೆಡ್ಡಿ ಪಾಳ್ಯದ ಹೆರಿಗೆ ಆಸ್ಪತ್ರೆಯನ್ನು ನೂತನವಾಗಿ ನವೀಕರಿಸಲಾಗಿದ್ದು ಕಟ್ಟಡ ಕಾಮಗಾರಿ ಪೂರ್ಣಗೊಂಡಿರುತ್ತದೆ. ಆದರೆ, ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಬೇಕಿದೆ. ಈ ಪೈಕಿ ಅವುಗಳನ್ನು ಪರೀಕ್ಷಿಸಿ ಸೇವೆಗೆ ಸಿದ್ದಪಡಿಸಿಕೊಳ್ಳುವಂತೆ ವೈದ್ಯರಿಗೆ ಸೂಚಿಸಿದರು.ಗಂಗಾನಗರದಲ್ಲಿ ಹೆರಿಗೆ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಆ ಬಳಿಕ ಆರ್.ಟಿ.ನಗರ ಸಾಯಿಮಂದಿರದ ಬಳಿ ದ್ವಿತೀಯ ರಾಜಕಾಲುವೆಯನ್ನು ಪರಿಶೀಲಿಸಿ ಹೂಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುಮಾರು 1.6 ಕಿ.ಮೀ ಉದ್ದದ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ರಸ್ತೆ ದುರಸ್ಥಿ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಪಾದಚಾರಿ ಮಾರ್ಗ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ ಜುಲೈ ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆಚ್.ಬಿ.ಆರ್ ಲೇಔಟ್ ಮೊದಲನೇ ಹಂತ, 8ನೇ ಮುಖ್ಯ ರಸ್ತೆಯಲ್ಲಿ ರಾಜಕಾಲುವೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದಲ್ಲಿ ನೀರು ಹೊರಬಾರದಂತೆ ತಡೆಗೋಡೆಯನ್ನು ಎತ್ತರಿಸಿ ಶಿಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್.ಬಿ.ಆರ್ ಲೇಔಟ್ ನಲ್ಲಿ 17 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಸದರಿ ಕಟ್ಟಡದ(ಜಿ + 4 ಅಂತಸ್ತಿನ ಕಟ್ಟಡ) ಕಾಮಗಾರಿಯು ಶೇ. 65 ರಷ್ಟು ಪೂರ್ಣಗೊಂಡಿದ್ದು, ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್, ಲ್ಯಾಬ್ಸ್, ಕನ್ಸಲ್ಟೇಷನ್ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಇರಲಿವೆ. ಈ ಸಂಬಂಧ ಮುಂದಿನ 6 ತಿಂಗಳಲ್ಲಿ ಆಸ್ಪತ್ರೆಯನ್ನು ಕಾರ್ಯಾರಂಭಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ, ಪುಲಕೇಶಿ ನಗರ ಕೋಮಲ ಜಂಕ್ಷನ್ ಬಳಿ ಬಡವರ್ಗದ ಜನರಿಗಾಗಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಸದ್ಯ ಶೇ. 30 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ 12 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Edited By :
Kshetra Samachara

Kshetra Samachara

10/05/2022 05:23 pm

Cinque Terre

2.57 K

Cinque Terre

0

ಸಂಬಂಧಿತ ಸುದ್ದಿ