ಆನೇಕಲ್: ಗಡಿನಾಡು ಆನೇಕಲ್ ತಾಲೂಕಿನ ಪ್ರತಿ ಹಳ್ಳಿಗೂ ಸಾರಿಗೆ ಸಂಪರ್ಕ ಕಲ್ಪಿಸಲು ಅಂದು ಬಿಎಂಟಿಸಿ ಡಿಪೋ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಬಳಿಕ ಕೋಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿ ಶುರುವಾಯಿತು. ಆದ್ರೆ, 10 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧಕ್ಕೇ ನಿಂತು ಕಟ್ಟಡ ಗಿಡ-ಪೊದೆಗಳಿಂದ ಕೂಡಿ ಕಾಡಿನಂತಾಗಿದೆ. ಅಷ್ಟಕ್ಕೂ ಮಹತ್ವಾಕಾಂಕ್ಷೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದಾದರೂ ಯಾಕೆ ಅಂತೀರಾ? ಈ ಸ್ಟೋರಿ ನೋಡೋಣ...
ಹೀಗೆ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಮದ್ಯದ ಬಾಟಲಿಗಳು, ಅರ್ಧಕ್ಕೆ ನಿಂತ ಕಟ್ಟಡದ ಪಿಲ್ಲರ್ ಗಳು... ಈ ದೃಶ್ಯಾವಳಿ ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಾವಲ ಹೊಸಹಳ್ಳಿ ಬಳಿ. ಕಾವಲಹೊಸಹಳ್ಳಿ ಸರ್ವೇ ನಂ. 9ರಲ್ಲಿ 10 ವರ್ಷಗಳ ಹಿಂದೆ 4.5 ಎಕರೆ ಜಾಗದಲ್ಲಿ Bmtc ಡಿಪೋ ನಿರ್ಮಿಸಲು ಅಂದು ಸಚಿವರಾಗಿದ್ದ ಎ. ನಾರಾಯಣಸ್ವಾಮಿ ಜಾಗ ನಿಗದಿ ಪಡಿಸಿದ್ದರು.
ಆದರೆ, ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಬಳಿಕ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಬಿಎಂಟಿಸಿ ಡಿಪೋ ನಿರ್ಮಿಸಲು ಕಾಮಗಾರಿ ಪೂಜೆ ನೆರವೇರಿಸಿದ್ದರು. ಆದ್ರೆ ಅದ್ಯಾಕೋ ಅಧಿಕಾರಿಗಳು ಕಾಮಗಾರಿಗೆ ಟೆಂಡರ್ ಕರೆದು ಕೆಲಸ ಅರ್ಧಕ್ಕೆ ನಿಲ್ಲಿಸಿದ್ದಾರೆ. ಜೊತೆಗೆ ಕಾಮಗಾರಿಗಾಗಿ ರಾಶಿ ಹಾಕಲಾಗಿದ್ದ ಕಬ್ಬಿಣ, ಸಿಮೆಂಟ್, ಜಲ್ಲಿಕಲ್ಲು ಕಳ್ಳರ ಪಾಲಾಗಿದೆ.
ಬಿಎಂಟಿಸಿ ಡಿಪೋ ನಿರ್ಮಾಣವಾದರೆ ಸುತ್ತಮುತ್ತಲಿನ ಹಳ್ಳಿಗಳು ಅಭಿವೃದ್ಧಿಯಾಗುತ್ತದೆ ಎಂದು ಡಿಪೋ ನಿರ್ಮಾಣಕ್ಕೆ ಜಮೀನು ನೀಡಲಾಗಿತ್ತು. ಆದರೆ ಇದೀಗ ಕೃಷಿಕರು ಡಿಪೋ ಪರಿಸರದಲ್ಲಿ ಓಡಾಡುವುದೇ ಕಷ್ಟವಾಗಿದೆ. ಪುಂಡರು ಪೊದೆಗಳಲ್ಲಿ ಕುಡಿಯುವುದು, ಗಾಂಜಾ ಸೇವನೆ ಸಹಿತ ಅನೈತಿಕ ಚಟುವಟಿಕೆ ತಾಣವನ್ನಾಗಿಸಿದ್ದಾರೆ. ಇಡೀ ಪ್ರದೇಶ ಕಸಮಯವಾಗಿದ್ದು, ಗಬ್ಬು ನಾರುತ್ತಿದೆ.
ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬಿಎಂಟಿಸಿ ಡಿಪೋಗೆ ನಿಗದಿ ಪಡಿಸಿದ ಜಮೀನಿನ ಮಧ್ಯೆ ಖಾಸಗಿಯವರ ಜಮೀನು ಇದ್ದು, ಅದನ್ನು ಗಮನಿಸದೇ ಕಾಮಗಾರಿ ಆರಂಭಿಸಿದ್ದು, ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾತ್ರ ಅಧಿಕಾರಿಗಳು ಮಾಡದಿರುವುದು ನಿಜಕ್ಕೂ ಬೇಸರದ ಸಂಗತಿ.
- ಹರೀಶ್ ಗೌತಮನಂದ, ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
PublicNext
04/05/2022 08:41 am