ಬೆಂಗಳೂರು: ಈ ಮೊದಲು ಕಸದಿಂದ ವಿದ್ಯುತ್ ಉತ್ಪಾದಿಸುವ ಕನಸಿನ ಯೋಜನೆಗೆ ಖಾಸಗಿ ಕಂಪನಿಗಳು ಮುಂದೆ ಬರುತ್ತಿರಲಿಲ್ಲ. ಈಗ ಸ್ವತಃ ಸರ್ಕಾರದ ಅಂಗಸಂಸ್ಥೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್)ವೇ ಯೋಜನೆ ಕೈಗೆತ್ತಿಕೊಂಡಿದೆ. ಆದರೆ, ಇದಕ್ಕೆ ಬಿಬಿಎಂಪಿ ನಿಯಮಿತವಾಗಿ ತನ್ನ ಪಾಲಿನ ಹಣವನ್ನೇ ನೀಡುತ್ತಿಲ್ಲ. ಇದು ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಗೆ ಎಡೆಮಾಡಿಕೊಡುವ ಲಕ್ಷಣಗಳು ಕಂಡುಬರುತ್ತಿವೆ.
ಸುಮಾರು 260 ಕೋಟಿ ರೂ. ವೆಚ್ಚದಲ್ಲಿ ಬಿಡದಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ 2020ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಿದ್ದು, ವರ್ಷಾಂತ್ಯಕ್ಕೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಕೆಪಿಸಿಎಲ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೇ. 50ರಷ್ಟು ಅಂದರೆ ತಲಾ 130 ಕೋಟಿ ವೆಚ್ಚ ಭರಿಸುವ ಮೂಲಕ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಇದನ್ನು ಯೋಜನೆಗಳ ಪ್ರಗತಿಗೆ ಅನುಗುಣವಾಗಿ ಎರಡೂ ಸಂಸ್ಥೆಗಳು ಹಂತ-ಹಂತವಾಗಿ ಹಣ ನೀಡಬೇಕಾಗುತ್ತದೆ. ಆರಂಭದಲ್ಲಿ ತಲಾ 10 ಕೋಟಿ ವಿನಿಯೋಗಿಸಿದ್ದು, ಇದಕ್ಕೆ ಪ್ರತಿಯಾಗಿ “ಯುಟಿಲೈಸೇಷನ್ ಪ್ರಮಾಣಪತ್ರ’ ಕೂಡ ದೊರೆತಿದೆ.
ಎರಡನೇ ಹಂತದಲ್ಲಿ ತಲಾ 30 ಕೋಟಿ ನೀಡಬೇಕಿದ್ದು, ಕೆಪಿಸಿಎಲ್ ತನ್ನ ಪಾಲಿನ ಹಣ ಬಿಡುಗಡೆ ಮಾಡಿದೆ. ಆದರೆ, ಪಾಲಿಕೆಯಿಂದ ನಾಲ್ಕು ತಿಂಗಳಾದರೂ ಹಣ ಬಿಡುಗಡೆ ಆಗಿಲ್ಲ. ಈ ಸಂಬಂಧ ಮೂರು ಬಾರಿ ಕೆಪಿಸಿಎಲ್‌ನಿಂದ ಪತ್ರ ಬರೆಯಲಾಗಿದೆ. ತಿಂಗಳ ಹಿಂದಷ್ಟೇ ಸರ್ಕಾರದಿಂದ ಪಾಲಿಕೆಗೆ ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಿಂದಲೂ ಯೋಜನೆಗೆ ಹಣ ಬಿಡುಗಡೆ ಆಗಿಲ್ಲ. ಈ ವಿಳಂಬ ಧೋರಣೆ ಮುಂದುವರಿದರೆ, ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಯೋಜನೆ ಅಡಿ ಪುನರ್‌ಬಳಕೆ ಸಾಧ್ಯವಿಲ್ಲದ ಕಸ (ಆರ್‌ಡಿಎಫ್)ವನ್ನು ಸುಟ್ಟು ಅದರಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಸುಮಾರು 600 ಟನ್ ನಗರದ ತ್ಯಾಜ್ಯವು ಇದಕ್ಕೆ ಪೂರೈಸಲಾಗುತ್ತದೆ. ಇದರಿಂದ 11.5 ಮೆ.ವಾ. ವಿದ್ಯುತ್ ಉತ್ಪಾದಿಸಿ, ಸರಬರಾಜು ಮಾಡಲಾಗುತ್ತದೆ. 2023ರ ಮಾರ್ಚ್ ವೇಳೆಗೆ ಇದನ್ನು ಲೋಕಾರ್ಪಣೆ ಮಾಡುವ ಗುರಿಯನ್ನು ಕೆಪಿಸಿಎಲ್ ಹೊಂದಿದೆ. ಪ್ರಸ್ತುತ ಶೇ. 35ರಿಂದ 40ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 35-40 ಕೋಟಿ ರೂ. ಖರ್ಚಾಗಿದೆ. ಕೆಪಿಸಿಎಲ್ ಈ ಯೋಜನೆಗಾಗಿ ತನ್ನ ಪಾಲಿನ ಹಣ ಭರಿಸಲು ಬ್ಯಾಂಕ್‌ನಿಂದ ಸಾಲ ಮಾಡಿದೆ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Kshetra Samachara
03/05/2022 05:14 pm