ಬೆಂಗಳೂರು - ಯಲಹಂಕ ವಲಯ ವ್ಯಾಪ್ತಿಯಲ್ಲಿನ ಯಲಹಂಕ ಕೆರೆ ಅಭಿವೃದ್ಧಿ, ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಬಳಿಯ ರಾಜಕಾಲುವೆ ಅಭಿವೃದ್ಧಿ, ಜಕ್ಕೂರು ಬಳಿಯ ರಸ್ತೆ ಅಗಲೀಕರಣ ಕಾಮಗಾರಿಯನ್ನು ಮಾನ್ಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.
ಯಲಹಂಕ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಸದ್ಯ ಕೆರೆ ಅಭಿವೃದ್ಧಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೆಲವೆಡೆ ಫೆನ್ಸಿಂಗ್ ಹಾಗೂ ಕೆಲವೆಡೆ ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಮಾತ್ರ ಬಾಕಿಯಿದೆ. ಈ ಸಂಬಂಧ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಯಲಹಂಕ ಕೆರೆಯು 292 ಎಕರೆ ಪ್ರದೇಶದಲ್ಲಿಸದ್ದು, ಯಲಹಂಕ ಕೆರೆಯಲ್ಲಿ ಹೂಳನ್ನು ತೆರವುಗೊಳಿಸಿ, ಬಂಡ್, ಜೌಗು ಪ್ರದೇಶ, ಇನ್‌ಲೆಟ್-ಔಟ್‌ಲೆಟ್, ಕೆರೆಗೆ ಕೊಳಚೆ ನೀರು ಸೇರದಿರುವ ಹಾಗೆ ತಿರುವುಗಾಲುವೆ ನಿರ್ಮಾಣ, ಭದ್ರತಾ ಸಿಬ್ಬಂದಿಯ ಕೊಠಡಿ, ಸೈಕಲ್ ಟ್ರ್ಯಾಕ್, ವಿಹಾರಕ್ಕೆ ಬರುವವರಿಗೆ ವಿರಾಮದ ಸ್ಥಳ ಹಾಗೂ ಕೆರೆಯ ಸುತ್ತಲು ಫೆನ್ಸಿಂಗ್ ಅಳವಡಿಕೆ ಮಾಡಲಾಗಿದೆ. ಮಳೆಗಾಲದ ವೇಳೆ ಸ್ಥಳೀಯ ಪ್ರದೇಶದಲ್ಲಿ ಜಾಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳ ದುರಸ್ಥಿ ಕಾರ್ಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ನವೆಂಬರ್ ತಿಂಗಳಲ್ಲಿ ಜೋರು ಮಳೆಯಾದ ಪರಿಣಾಮ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಜಲಾವೃತಗೊಂಡು ಸಾಕಷ್ಟು ಸಮಸ್ಯೆಯಾಗಿತ್ತು. ಇದೀಗ ಆ ಭಾಗದಲ್ಲಿ ಜಲಾವೃತವಾಗದೆ ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ರಾಜಕಾಲುವೆಗಳ ಅಗಲೀಕರಣ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ನಲ್ಲಿ ಹಾದುಗೋಗುವ ರಾಜುಲುವೆಯನ್ನು 8 ಅಡಿಯಿಂದ 10 ಅಡಿಗೆ ಅಗಲೀಕರಣ ಮಾಡಿದ್ದು, ಸದರಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇದಕ್ಕೆ ಮಾನ್ಯ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಜಲಾವೃತ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಬಳ್ಳಾರಿ ರಸ್ತೆ ಜಕ್ಕೂರು ಬಳಿ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರಿ ವೈಮಾನಿಕ ಶಾಲೆಯಿಂದ ಒಟ್ಟು 2,450.74 ಚದರ ಮೀಟರ್ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ಈಗಾಗಲೇ ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಯೋಜಿಸಲಾಗಿದ್ದು, ಶೀಘ್ರ ಕಾರ್ಯಾದೇಶ ನೀಡಿ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಸದರಿ ಅಗಲೀಕರಣ ಮಾರ್ಗದಲ್ಲಿ ಗ್ಯಾಸ್ ಪೈಪ್ ಲೈನ್ ಇದ್ದು, ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲಾಗಿರುತ್ತದೆ. ಗ್ಯಾಸ್ ಪೈಪ್ ಲೈನ್ ಸ್ಥಳಾಂತರ ಮಾಡಿದ ಬಳಿಕ ರಸ್ತೆ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಕಾರ್ಯಪಾಲಕ ಅಭಿಯಂತರರಾದ ಶಿವಕುಮಾರ್ ರವರು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದರು.
Kshetra Samachara
30/04/2022 10:29 pm