ಬೆಂಗಳೂರು: ನಗರದ ಅವೆನ್ಯೂ ರಸ್ತೆ(ಮೈಸೂರು ಬ್ಯಾಂಕ್ ವೃತ್ತದಿಂದ ಎಸ್.ಜೆ.ಪಿ ರಸ್ತೆಯನ್ನು ಸಂಪರ್ಕಿಸುವ 1.02 ಕಿ.ಮೀ ಉದ್ದ)ಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಯನ್ನು ಮಾನ್ಯ ಆಡಳಿತಗಾರರು ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಮುಖ್ಯಸ್ಥರಾದ ರಾಕೇಶ್ ಸಿಂಗ್ ರವರು ನಿನ್ನೆ ತಡ ರಾತ್ರಿ ಸ್ಥಳಕ್ಕೆ ಹಠಾತ್ ಭೇಟಿ ನೀಡಿ ಕಾಮಗಾರಿಗಳನ್ನು ಖುದ್ದು ಪರಿವೀಕ್ಷಣೆ ನಡೆಸಿದರು.
ಅವೆನ್ಯೂ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಮಾದರಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯ ಪ್ರಗತಿಯನ್ನು ತಡ ರಾತ್ರಿ 1.30ರ ವೇಳೆಗೆ ಅಧಿಕಾರಿಗಳಿಗೆ ಮಾಹಿತಿ ನಿಡದೆ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ ಅವರು, 1.02 ಕಿ.ಮೀ ಉದ್ದದ ರಸ್ತೆ ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿರುತ್ತದೆ. ಈ ಪೈಕಿ ನಾಗರಿಕರ ದೈನಂದಿನ ವ್ಯಾಪಾರ, ವಹಿವಾಟಿಗೆ ತೊಂದರೆಯಾಗದ ರೀತಿಯಲ್ಲಿ 20 ದಿನಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ರಸ್ತೆಯ ಎರಡೂ ಬದಿ ಒಳಚರಂಡಿ ಕಾಮಗಾರಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆ ಕಾಮಗಾರಿ ಹಾಗೂ ಓಎಫ್‌ಸಿ ಕೇಬಲ್ ಸೇರಿದಂತೆ ಇನ್ನಿತರೆ ಕೇಬಲ್ ಗಳ ಅಳವಡಿಕೆಗೆ ಡಕ್ಟ್ ಗಳ ಅಳವಡಿಕೆ ಕಾಮಗಾರಿಯನ್ನು ಪೂರ್ಣಗೊಳಿಸಿ, ರಸ್ತೆಗೆ ಕಾಂಕ್ರೀಟ್ ಅಳವಿಡುಸುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿರುತ್ತದೆ. ಇದಲ್ಲದೆ ಎರಡೂ ಕಡೆ 100 ಎಂ.ಎಂ ಸಾಮರ್ಥ್ಯದ ಕುಡಿಯುವ ನೀರಿನ ಕೊಳವೆಗಳ ಅಳವಡಿಕೆ ಪೂರ್ಣಗೊಂಡಿರುತ್ತದೆ. 300 ಎಂ.ಎಂ ಸಾಮರ್ಥ್ಯದ ಕುಡಿಯುವ ನೀರಿನ ಕೊಳವೆಯ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಹಾಗೂ ವಿದ್ಯುತ್ ದೀಪಗಳ ಅಳವಡಿಕೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
Kshetra Samachara
28/04/2022 10:22 pm