ದೊಡ್ಡಬಳ್ಳಾಪುರ: ಯಲಹಂಕ-ಹಿಂದೂಪುರದ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಟೋಲ್ ರಸ್ತೆಯಲ್ಲಿನ ಹಳ್ಳಗುಂಡಿಗಳಿಂದ ರಸ್ತೆ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ರಸ್ತೆಯಲ್ಲಿ ಹಳ್ಳಗುಂಡಿ ಮುಚ್ಚಿದ ನಂತರವೇ ಟೋಲ್ ಸುಂಕ ಸಂಗ್ರಹಿಸಿ ಎಂದು ಕನ್ನಡಪರ ಸಂಘಟನೆ ಟೋಲ್ ಮುಂದೆ ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ಗಡಿಭಾಗದ ಮಾರಸಂದ್ರ ಬಳಿ ರಾಜ್ಯ ಹೆದ್ದಾರಿ 9ರ ಯಲಹಂಕ- ಹಿಂದೂಪುರ ರಾಜ್ಯ ಹೆದ್ದಾರಿ ಇದ್ದು, ರಾಜ್ಯ ಹೆದ್ದಾರಿಯ ನಿರ್ವಹಣೆಯನ್ನು ಯಲಹಂಕ ಎಪಿ ಬಾರ್ಡರ್ ಟೋಲ್ ವೆಸ್ ಪ್ರೈವೇಟ್ ಲಿಮಿಟೆಡ್ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಮಾರಸಂದ್ರ ಮತ್ತು ಗುಂಜೂರು ಬಳಿ ಟೋಲ್ ಮಾಡಿ ವಾಹನ ಸವಾರರಿಂದ ಟೋಲ್ ಸುಂಕ ಸಂಗ್ರಹಿಸುತ್ತಿದೆ. ಆದರೆ ಟೋಲ್ ರಸ್ತೆಯಲ್ಲಿ ಹಳ್ಳ ಗುಂಡಿಗಳಿದ್ದು ಇದರಿಂದ ರಸ್ತೆ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆಗಳಲ್ಲಿ ಸೂಚನ ಪಾಲಕಗಳನ್ನು ಹಾಕಿಲ್ಲವೆಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮಾರಸಂದ್ರ ಟೋಲ್ ಮುಂದೆ ಪ್ರತಿಭಟನೆ ನಡೆಸಿದರು. ರಸ್ತೆ ದುರಸ್ತಿ ಮಾಡುವವರೆಗೂ ಟೋಲ್ ಫ್ರೀ ಮಾಡಬೇಕು, ಶೀಘ್ರವೇ ಸೂಚನೆ ಫಲಕಗಳನ್ನು ಹಾಕಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಯಲಹಂಕ ಎಪಿ ಬಾರ್ಡರ್ ಟೋಲ್ ವೆಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜರ್ ರವಿಬಾಬು, ನಮಗೆ ಗೊತ್ತಿಲ್ಲದಂತೆ ಅನಧಿಕೃತವಾಗಿ ಬೆಸ್ಕಾಂ ಸೇರಿದಂತೆ ಹಲವು ಇಲಾಖೆಗಳು ಕಾಮಗಾರಿ ಕಾರಣಕ್ಕೆ ರಸ್ತೆ ಆಗೆದು ಹಾಗೆಯೇ ಬಿಡುವುದರಿಂದ ಟೋಲ್ ರಸ್ತೆಯಲ್ಲಿ ಹಳ್ಳ ಗುಂಡಿಗಳು ನಿರ್ಮಾಣವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ ಎಂದರು.
ಟೋಲ್ ಫ್ಲಾಜಾ ಬಳಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಪ್ರಥಮ ಚಿಕಿತ್ಸೆ ನೀಡುವ ಕೊಠಡಿಯನ್ನು ಗೋದಾಮು ಮಾಡಿಕೊಂಡಿದ್ದಾರೆ. ಪೊಲೀಸ್ ಚೌಕಿಯನ್ನ ಸಿಬ್ಬಂದಿಯ ವಿಶ್ರಾಂತಿ ಕೋಣೆ ಮಾಡಿಕೊಂಡಿರುವುದು ಸಹ ಪ್ರತಿಭಟನಿರತರ ಅಕ್ರೋಶಕ್ಕೆ ಕಾರಣವಾಯ್ತು.
PublicNext
22/03/2022 06:54 pm