ದೊಡ್ಡಬಳ್ಳಾಪುರ: ಮುಂಜಾನೆ ಮನೆಯಿಂದ ಹೊರಗೆ ಬಂದರೆ ತಾಜಾವಾದ ಗಾಳಿ ಮನಸ್ಸಿಗೆ ಮುದ ನೀಡುತ್ತದೆ. ಆದರಿಲ್ಲಿ ಮುಂಜಾನೆ ಎದ್ದು ಹೊರಗೆ ಬಂದರೆ ಉಮ್ಮಳಿಸಿ ವಾಂತಿ ಬರುತ್ತದೆ. ಗ್ರಾಮದ ಸಮೀಪದಲ್ಲೇ ಇರುವ ಕೋಳಿ ತ್ಯಾಜ್ಯ ಘಟಕದಿಂದ ಬರುವ ಕೆಟ್ಟ ವಾಸನೆಗೆ ಹತ್ತೂರಿನ ಗ್ರಾಮಸ್ಥರು ನರಕಯಾತನೆ ಅನುಭಸುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕಮಲೂರು ಜಮೀನಿನಲ್ಲಿ ಪೂರಿಂಚ್ ಎಂಟರ್ ಪ್ರೈಸಸ್ ಕಾರ್ಖಾನೆಯನ್ನು ನಡೆಸುತ್ತಿದೆ. ಕೋಳಿ ತ್ಯಾಜ್ಯ ಸೇರಿದಂತೆ ಪ್ರಾಣಿಗಳಿಂದ ಬರುವ ತ್ಯಾಜ್ಯದಿಂದ ಮೀನಿನ ಆಹಾರ ತಯಾರಿಸಲಾಗುತ್ತದೆ. ಈ ಸಮಯದಲ್ಲಿ ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿದ್ದು, ಇಂದು ಹತ್ತಾರು ಗ್ರಾಮಗಳಿಗೆ ಕಂಠಕವಾಗಿದೆ.
ಪೂರಿಂಚ್ ಎಂಟರ್ ಪ್ರೈಸಸ್ ಕಾರ್ಖಾನೆಯು ಮಧ್ಯರಾತ್ರಿ ತನ್ನ ಕಾರ್ಯಾರಂಭ ಮಾಡುತ್ತದೆ. ಹೀಗಾಗಿ ಸುಮಾರು 3 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಗೆ ಬಂದವರಿಗೆ ಕೆಟ್ಟ ವಾಸನೆಯ ಅನುಭವಾಗುತ್ತದೆ. ಈಗಾಗಲೇ ಈ ವಾಸನೆ ಸೇವನೆಯಿಂದ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದರಿಂದ ಕಾರ್ಖಾನೆಗೆ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ. ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಈ ಹಿಂದಿನ ತಹಶೀಲ್ದಾರ್ ಶಿವರಾಜ್ 2020ರ ಮಾರ್ಚ್ 19ರಂದು ಘಟಕ ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದರು. ಈ ಆದೇಶವನ್ನು ಪ್ರಶ್ನಿರುವ ಕಾರ್ಖಾನೆ ಹೈಕೋರ್ಟ್ ಮೆಟ್ಟಿಲೇರಿ ಸ್ಟೇ ಮೂಲಕ ಮತ್ತೆ ಕಾರ್ಖಾನೆ ಪ್ರಾರಂಭ ಮಾಡಿದ್ದಾರೆ.
ಇಂದಿನ ತಹಶೀಲ್ದಾರ್ ಮೋಹನ್ ಕುಮಾರಿ ಕಾರ್ಖಾನೆಗೆ ಭೇಟಿ ನೀಡಿದ್ದು, ಕಾರ್ಖಾನೆಯ ಅವರಣದಲ್ಲಿ ಸ್ವಚ್ಛತೆ ಇಲ್ಲದಿರವುದು ಗಮನಕ್ಕೆ ಬಂದಿದೆ. ಇನ್ನು ಹೈಕೋರ್ಟ್ ನಲ್ಲಿರುವ ಸ್ಟೇ ಆರ್ಡರ್ ನೋಡಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
PublicNext
03/03/2022 11:23 am