ರಸ್ತೆ ಸರಿ ಇಲ್ಲ ಅಂದ್ರೆ ಅದಕ್ಕೆ ಕಾಂಟ್ರ್ಯಾಕ್ಟರ್ ಹೊಣೆ.ರಸ್ತೆಗುಂಡಿ ಬಿದ್ದಿದ್ರೆ, ಅದಕ್ಕೆ ಜಲಮಂಡಳಿಯವರು ಕಾರಣ. ಹೀಗೆ ತನ್ನ ಕಳಪೆ ಕಾಮಗಾರಿಗಳ ಕರ್ಮಕಾಂಡವನ್ನು ಮುಚ್ಚಿಕೊಳ್ಳಲು ಈ ತನಕ ಅವರಿವರ ಮೇಲೆ ಆರೋಪ ಹೊರಿಸ್ತಿದ್ದ ಬಿಬಿಎಂಪಿ, ಇದೀಗ ತನ್ನ ಹುಳುಕು ಮುಚ್ಚಿಟ್ಟುಕೊಳ್ಳಲು ಹೆಗ್ಗಣಗಳ ಮೇಲೆ ಆರೋಪ ಹೊರಿಸಿ ನಗೆಪಾಟಲಿಗೆ ಕಾರಣವಾಗಿದೆ. ಫುಟ್ಪಾತ್ ಹಾಳಾಗೋದಕ್ಕೆ ಹೆಗ್ಗಣಗಳು ಕಾರಣನಾ? ಕೇಳೊಕ್ಕೆ ತಮಾಷೆ ಅನ್ನಿಸಿದ್ರೂ ಇದು ಬಿಬಿಎಂಪಿ ಜಾಣ ವಾದ.
ರಸ್ತೆ ಸರಿ ಇಲ್ಲ ಅಂದ್ರೆ, ಇದಕ್ಕೆ ನಾವು ಹೊಣೆಯಲ್ಲ. ಕಾಂಟ್ರ್ಯಾಕ್ಟರ್ ಹೊಣೆ ಅಂತ ಬಿಬಿಎಂಪಿ ಸಬೂಬು ನೀಡುತ್ತೆ. ರಸ್ತೆಗುಂಡಿ ಬಿದ್ರೆ, ಇದಕ್ಕೂ ನಾವು ಹೊಣೆಯಲ್ಲ, ಜಲಮಂಡಳಿ ಕಾಮಗಾರಿಯಿಂದ ಹೀಗಾಗಿದೆ ಅಂತ ಬಿಬಿಎಂಪಿ ಕಾರಣ ಕೊಡುತ್ತೆ. ಹೀಗೆ ಕಾರಣಗಳ ಮೇಲೆ ಕಾರಣ ಕೊಟ್ಟು ಜಾರಿಕೊಳ್ಳೊ ಪ್ರಯತ್ನ ಮಾಡೋ ಬಿಬಿಎಂಪಿ, ಇದೀಗ ಫುಟ್ಪಾತ್ ಕಿತ್ತು ಬಂದಿರೋದಕ್ಕೂ ಹೊಸ ಕಾರಣ ಕೊಟ್ಟಿದೆ. ಇಲ್ಲಿ ತನಕ ಅವರಿವರ ಮೇಲೆ ಆರೋಪ ಹೊರಿಸಿ ಕೈತೊಳೆದುಕೊಳ್ತಿದ್ದ ಬಿಬಿಎಂಪಿ, ಈಗ ಫುಟ್ಪಾತ್ ಹಾಳಾಗೋಕ್ಕೆ ಹೆಗ್ಗಣಗಳು ಕಾರಣ ಅಂತ ಹೊಸ ಸಬೂಬು ನೀಡಿದೆ.
ಸ್ಮಾರ್ಟ್ ಸಿಟಿ ಯೋಜನೆಯ, ಟೆಂಡರ್‌ಶ್ಯೂರ್ ಕಾಮಗಾರಿ ಅಡಿಯಲ್ಲಿ ನೃಪತುಂಗ ರಸ್ತೆ ಸಮೀಪ ಹೊಸ ಫುಟ್ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ ಕೆಲವೇ ತಿಂಗಳಲ್ಲಿ ಫುಟ್ಪಾತ್ ಕಿತ್ತು ಬಂದಿದೆ. ಇದಕ್ಕೆ ಹೆಗ್ಗಣಗಳೇ ಕಾರಣ ಎಂದು ಬಿಬಿಎಂಪಿ ಚೀಫ್ ಇಂಜಿನಿಯರ್ ಆರೋಪಿಸಿದ್ದಾರೆ. ನೃಪತುಂಗ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯೊಳಗಿನ ಕ್ಯಾಂಟೀನ್‌ನಿಂದ ಈ ಎಲ್ಲಾ ಸಮಸ್ಯೆಗಳು ಉದ್ಭವಿಸಿರುವ ಬಗ್ಗೆ ಬಿಬಿಎಂಪಿ ದೂರಿದೆ. ಕ್ಯಾಂಟೀನ್‌ನಿಂದ ಹೆಗ್ಗಣಗಳ ಸಂಖ್ಯೆ ಹೆಚ್ಚಳಗೊಂಡಿದ್ದು, ಹೆಗ್ಗಣಗಳು ಕಲ್ಲು ಕೊರೆದು ಹಾಳು ಮಾಡುತ್ತಿವೆ ಎಂದು ಆರೋಪ ಹೊರಿಸಿದೆ.
ಟೆಂಡರ್ ಶ್ಯೂರ್ ಕಾಮಗಾರಿ ಅಂದ್ರೆ ಅದು ಟಾಪ್ ಕಾಮಗಾರಿ ಅಂತ ಖುದ್ದು ಬಿಬಿಎಂಪಿಯೇ ತನ್ನ ಬೆನ್ನು ತಟ್ಟಿಕೊಳ್ಳುತ್ತೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಾಕಲಾದ ಫುಟ್ಪಾತ್‌ಗಳು ಕನಿಷ್ಠ ಪಕ್ಷ 20 ವರ್ಷಗಳ ಕಾಲ ಹಾಳಾಗದೇ ಉಳಿಯಬೇಕು. ಆದರೆ ಕೇವಲ 6 ತಿಂಗಳಲ್ಲಿ ಹೊಸದಾದ ಫುಟ್ಪಾತ್ ಕಿತ್ತು ಬಂದಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಮುಖ್ಯ ಕಾರಣ ಎಂಬುದು ಸ್ಪಷ್ಟಗೊಂಡಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ತನಿಖೆಗೆ ಸೂಚಿಸಿದ್ದಾರೆ.
ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಬೇಸ್ ಲೆವೆಲ್ ಕೆಲಸಗಳು ಕರೆಕ್ಟ್ ಆಗಿ ನಡೆಯಬೇಕು. ಉದಾಹರಣೆಗೆ ಫುಟ್ಪಾತ್ ಹಾಕುವ ಮೊದಲು ಸ್ಲಾಬ್‌ಗಳ ಕೆಳಭಾಗದಲ್ಲಿ ಸಿಮೆಂಟ್ ಬೇಸ್ ಹಾಕಬೇಕು. ಸಿಮೆಂಟ್ ಬೇಸ್ ಗಟ್ಟಿಯಾದಾಗ ಅದರ ಮೇಲೆ ಫುಟ್ಪಾತ್ ಸ್ಲಾಬ್‌ಗಳನ್ನು ಕೂರಿಸಿದರೆ ಲೈಫ್ ಜಾಸ್ತಿ ಬರುತ್ತದೆ. ಆದರೆ ಬಿಬಿಎಂಪಿ ಕಳೆಪ ಕಾಮಗಾರಿ ಮಾಡಿರೋದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕೇವಲ ಮಣ್ಣನ್ನು ಲೆವೆಲ್ ಮಾಡಿ, ಅದರ ಮೇಲೆ ಸ್ಲಾಬ್ ಕಲ್ಲುಗಳನ್ನು ಕೂರಿಸಲಾಗಿದೆ. ಕಳಪೆ ಕಾಮಗಾರಿ ಮಾಡಿದ್ರೂ, ಹೆಗ್ಗಣಗಳ ಮೇಲೆ ಗೂಬೆ ಕೂರಿಸಲು ಬಿಬಿಎಂಪಿ ಹೊಸ ಐಡಿಯಾ ಕಂಡು ಕೊಂಡಿದೆ.
-ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
01/07/2022 07:33 pm