ಕಳೆದ ಮೂರು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆಗೆ ಸಿಟಿ ಜನರು ನಲುಗಿ ಹೋಗಿದ್ದಾರೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಹೆಬ್ಬಾಳದಲ್ಲಿರುವ CLA ಲೇಔಟ್ ಜಲಾವೃತಗೊಂಡು, ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ವಿದ್ಯಾರ್ಥಿನಿ ಸಾವಿನಿಂದ ಪಾರಾಗಿದ್ದಾಳೆ.
ನಿನ್ನೆ ತಡರಾತ್ರಿ ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಳೆಯ ಎಫೆಕ್ಟ್ ತಟ್ಟಿದ್ದು, ಭಾರಿ ಅನಾಹುತ ಒಂದು ತಪ್ಪಿದೆ. ಹೌದು ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಇರುವ ನಾರಾಯಣ ಟೆಕ್ನೋ ಸ್ಕೂಲ್ ಮುಂಭಾಗ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮ್ಯಾನ್ ಹೋಲ್ ನಲ್ಲಿ ಬಿದ್ದಿದ್ದಾಳೆ. ರಸ್ತೆ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ನಿಂತಿದ್ದು, ವಿದ್ಯಾರ್ಥಿನಿ ಶಾಲೆಗೆ ಬರುವಾಗ ಘಟನೆ ನಡೆದಿದೆ. ರಸ್ತೆಯ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಮ್ಯಾನ್ ಹೋಲ್ ಕಾಣಿಸಿಲ್ಲ.. ಶಾಲೆ ಮುಂದೆ ಎಡಭಾಗಕ್ಕೆ ಬೈಕ್ ಅಡ್ಡ ಬಂದ ಪರಿಣಾಮ ರಸ್ತೆಯ ಮಧ್ಯ ಭಾಗದಲ್ಲಿ ಮ್ಯಾನ್ ಹೋಲ್ ನಲ್ಲಿ ವಿದ್ಯಾರ್ಥಿನಿ ಜಾರಿ ಬಿದ್ದಿದ್ದಾಳೆ. ತಕ್ಷಣ ಸ್ಥಳೀಯರು ವಿದ್ಯಾರ್ಥಿನಿಯನ್ನ ರಕ್ಷಣೆ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಸ್ಥಳೀಯರು ಮಾತನಾಡಿ,. ರಸ್ತೆ ಮಧ್ಯೆ ಹಾಗೂ ಶಾಲೆಯ ಪಕ್ಕದಲ್ಲಿ ಮ್ಯಾನ್ ಹೋಲ್ ಓಪನ್ ಆಗಿದೆ. ಮಳೆ ಬಂದಾಗ ಗೊತ್ತಾಗಲ್ಲ. ಇವತ್ತು ದೊಡ್ಡ ಅನಾಹುತ ಒಂದು ತಪ್ಪಿದೆ.. ಇಲ್ಲಿನ ಶಾಸಕರು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು..
ಇನ್ನೂ ಹೆಬ್ಬಾಳದ ಸಿ ಐ ಎಲ್ ಲೇಔಟ್ ನಿನ್ನೆ ಸುರಿದ ಮಳೆಯಿಂದ ಜಲಾವೃತಗೊಂಡಿದೆ. ಮನೆಗಳು ಸ್ವಿಮ್ಮಿಂಗ್ ಪೂಲ್ ಗಳಾಗಿ ಮಾರ್ಪಾಡಾಗಿವೆ. ಇಲ್ಲಿ ಕಳೆದ 20 ವರ್ಷಗಳಿಂದ ಇದೇ ಗೋಳು ಅಂತ ಸ್ಥಳೀಯರು ಆರೋಪ ಮಾಡಿದ್ದಾರೆ. ಆದ್ರೆ ಸ್ಥಳೀಯ ಶಾಸಕರು ಮಾತ್ರ ಸದ್ಯ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದನೆ ಮಾಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ನಿನ್ನೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಒಟ್ಟಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಯೆಲ್ಲೋ ಅಲಟ್೯ ಘೋಷಿಸಲಾಗಿದೆ.
ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
03/08/2022 07:14 pm