ಬೆಂಗಳೂರು: ಸಂಚಾರಿ ಪೊಲೀಸರ ಸಮಯಪ್ರಜ್ಞೆಯಿಂದ ಅಮ್ಮನಿಂದ ದೂರವಾಗಿದ್ದ ಮಗಳನ್ನು ಮತ್ತೆ ತಾಯಿ ಮಡಿಲು ಸೇರಿಸಿದ್ದಾರೆ.
ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ಬಿಎಂಟಿಸಿ ಬಸ್ ನಲ್ಲಿ ಇಳಿಯುವ ಆತುರದಲ್ಲಿ ಮಹಿಳೆ ತನ್ನ ಮಗಳನ್ನೇ ಮರೆತಿದ್ದರು. ಬಸ್ ಸಹ ಮುಂದೆ ಚಲಿಸಿದ್ದರಿಂದ ಮಗಳು ಬಸ್ ನಿಂದ ಇಳಿದುಕೊಳ್ಳದಿರುವುದು ನಂತರ ಗೊತ್ತಾಗಿದೆ. ಇದರಿಂದ ಆತಂಕಕ್ಕೆ ಒಳಗಾಗಿ ದುಃಖಭರಿತರಾಗಿದ್ದ ಮಹಿಳೆಯು ಯಾರಿಗೆ ಹೇಳಬೇಕೆಂಬ ಗೊಂದಲ ಶುರುವಾಗಿತ್ತು. ಆಗ ಕಣ್ಣಿಗೆ ಕಾಣಿಸಿದ್ದೆ ಯಶವಂತಪುರ ಸಂಚಾರಿ ಠಾಣೆಯ ಪೊಲೀಸರು.
ಪೊಲೀಸರು ಬಳಿ ಹೋಗಿ ಮಗಳ ಬಸ್ ನಲ್ಲಿ ಮಿಸ್ ಆಗಿರುವುದರ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಯಾವ ಮಾರ್ಗದ ಬಸ್.ಬಸ್ ನಂಬರ್ ಸೇರಿದಂತೆ ಯಾವ ಮಾಹಿತಿಯು ಆಕೆ ಬಳಿ ಇರಲಿಲ್ಲ. ಕಣ್ಣೀರು ಹಾಕುತ್ತಿದ್ದ ಮಹಿಳೆಯನ್ನು ಸಂತೈಸಿ ಕೂಡಲೇ ವೈರ್ ಲೇಸ್ ಮೂಲಕ ಟ್ರಾಫಿಕ್ ಸಿಬ್ಬಂದಿ ಮಾಹಿತಿ ನೀಡಿದ್ದರು. ಕೂಡಲೇ ಎರಡು ತಂಡಗಳಾಗಿ ಕಾರ್ಯಾಚರಣೆ ಕೈಗೊಂಡ ಎಸ್ ಐಐ ರಾಜಶೇಖರ್, ಕಾನ್ ಸ್ಟೇಬಲ್ ಗಳಾದ ಮಂಜಣ್ಣ, ಚಂದ್ರಶೇಖರ್ ಹಾಗೂ ಶಿವಕುಮಾರ್ ತಂಡ ಕಾರ್ಯಾಚರಣೆ ನಡೆಸಿ ಬಾಲಕಿಯನ್ನ ಪತ್ತೆ ಹಚ್ಚಿ ತಾಯಿಯ ಮಡಿಲಿಗೆ ಸೇರಿಸಿದೆ. ತಂಡದ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
26/08/2022 08:21 pm