ಬೆಂಗಳೂರು: ಬಿಬಿಎಂಪಿಗೆ ರಸ್ತೆ ಗುಂಡಿ ಮುಚ್ಚಿ ಮುಚ್ಚಿ... ಅಂತ ಹೈಕೋರ್ಟ್ ಆಗಾಗ ಚಾಟಿ ಬೀಸ್ತಿದ್ರೂ ದಪ್ಪ ಚರ್ಮದ ಬಿಬಿಎಂಪಿ ಮಾತ್ರ ಇದ್ರ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ನಿತ್ಯ ಗುಂಡಿ ರಸ್ತೆಗೆ ಅದೆಷ್ಟೋ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ತಿದ್ದಾರೆ.
ಹೀಗೆ ಗುಂಡಿ ಬಿದ್ದ ರಸ್ತೆಗೆ ಪಾದಚಾರಿಗಳು, ವಾಹನ ಸವಾರರು ಬೀಳುವುದನ್ನು ಕಣ್ಣಾರೆ ಕಂಡಿದ್ದ ಬ್ಯಾಟರಾಯನಪುರ ಸಂಚಾರಿ ಕಾನ್ ಸ್ಟೇಬಲ್ ಸದ್ದಾಂ ಅವರು ಗುಂಡಿ ಮುಚ್ಚಲು ಹಿರಿಯ ಅಧಿಕಾರಿಗಳ ಮೂಲಕ ಸಾಕಷ್ಟು ಬಾರಿ ಬಿಬಿಎಂಪಿ ಗಮನಕ್ಕೆ ತಂದಿದ್ರು. ಆದ್ರೂ, ಬಿಬಿಎಂಪಿ ಮಾತ್ರ ಇದ್ರ ಬಗ್ಗೆ ತಲೆ ಕೆಡಿಸಿ ಕೊಂಡಿರ್ಲಿಲ್ಲ.
ಇದ್ರಿಂದ ಬೇಸತ್ತ ಸದ್ದಾಂ, ಇಂದು ಮೈಸೂರು ರಸ್ತೆಯ ಸ್ಯಾಟಲೈಟ್ ಬಳಿ ಗುಂಡಿ ಬಿದ್ದ ರಸ್ತೆಗೆ ತಾನೇ ಸಿಮೆಂಟ್- ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಉಳಿದ ಸಿಮೆಂಟ್, ಕಾಂಕ್ರೀಟ್ ಲಾರಿ ನಿರ್ವಾಹಕರ ಬಳಿ ಕಾಂಕ್ರೀಟ್ ಸಹಾಯ ಪಡೆದು ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ರು.
ಯೂನಿಫಾರ್ಮ್ ನಲ್ಲೇ ಕಾಂಕ್ರೀಟ್ ಸಮತಟ್ಟು ಮಾಡಿ, ಹೊಂಡಾಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿತ್ಯ ಟ್ರಾಫಿಕ್ ಪೊಲೀಸರು, ಸುಖಾಸುಮ್ಮನೇ ಗಾಡಿ ತಡೆದು ಬೇಕಾಬಿಟ್ಟಿ ಫೈನ್ ಹಾಕ್ತಾರೆ ಅಂತ ಮೂದಲಿಸುತ್ತಿದ್ದ ಜನರೆಲ್ಲ ಈಗ ಸದ್ದಾಂ ಕೆಲಸಕ್ಕೆ ಭೇಷ್ ಅಂತಿದ್ದಾರೆ.
PublicNext
18/06/2022 05:52 pm