ಬೆಂಗಳೂರು: ಅಕ್ಷಯ ತದಿಗೆಯ ದಿನ ತುಂಬಾ ಜನ ಚಿನ್ನ ಖರೀದಿಯಲ್ಲಿ ಬ್ಯುಸಿಯಾದ್ರೆ ಸಿಲಿಕಾನ್ ಸಿಟಿಯ ಚಾಮರಾಜ ಪೇಟೆಯ ಕನ್ನಡ ತಿಂಡಿಕೇಂದ್ರದ ಡಾ. ರಾಮಚಂದ್ರ ಮತ್ತು ಅಶ್ವತ್ಥನಾರಾಯಣ ಅವರು ಅನ್ನ ಹಂಚುವುದರಲ್ಲಿ ತಲ್ಲೀನರಾಗಿದ್ದರು.
ಹೌದು! ಅದೊಂದು ವಿಶಿಷ್ಟ ಕಾರ್ಯಕ್ರಮ. ಧಾರ್ಮಿಕ ನಂಬಿಕೆಗೆ ಮಾನವೀಯತೆಯ,ಪ್ರೀತಿ- ವಿಶ್ವಾಸದ ಧಾರೆ ಎರೆದ ಕಾರ್ಯಕ್ರಮ. ಅದರ ಹೆಸರು 'ಪೌರಕಾರ್ಮಿಕರೊಂದಿಗೆ ಒಂದು ಬೆಳಗು'.
ಅಕ್ಷಯ ತೃತೀಯದ ದಿನದಂದು ಚಿನ್ನದ ಬದಲು ಅನ್ನವನ್ನು ಅಕ್ಷಯವನ್ನಾಗಿಸುವ ಉದಾತ್ತ ಧ್ಯೇಯವನ್ನು ಸಾರುವ ಸಲುವಾಗಿ ನಗರ ಸ್ವಚ್ಛತೆಗೆ ತಮ್ಮ ಕೊಡುಗೆ ನೀಡುವ ಪೌರಕಾರ್ಮಿಕರಿಗೆ ಅನ್ನ ನೀಡುವ ಕಾರ್ಯಕ್ರಮ.
ಚಾಮರಾಜಪೇಟೆ ಮತ್ತು ಬಸವನಗುಡಿ ವಿಧಾನಸಭಾ ವ್ಯಾಪ್ತಿಯ ಸುಮಾರು 500ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಚಿತವಾಗಿ ಬೆಳಗಿನ ಉಪಹಾರ ನೀಡುವ ಮೂಲಕ ಅನ್ನದಾನದ ಅಭಿಯಾನಕ್ಕೆ ಚಾಲನೆ ದೊರೆತ ಕಾರ್ಯಕ್ರಮ. ಇಂಥದ್ದೊಂದು ವಿಶಿಷ್ಟ ಕೆಲಸದ ಮೂಲ ಪ್ರೇರಕ ಶಕ್ತಿಯೇ ಡಾ ರಾಮಚಂದ್ರ ಮತ್ತು ಅಶ್ವಥ್ ನಾರಾಯಣ ಸಹೋದರರು. ರಾಮಣ್ಣ- ಗುಂಡಣ್ಣ ಎಂದೇ ಪ್ರಸಿದ್ಧರಾದ ಈ ಸಹೋದರರು ನಿತ್ಯ ನಿರಂತರ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಸಿಕೊಂಡವರು. ಕನ್ನಡ, ಅನ್ನ, ಅಂಗಾಗದಾನ ಇದು ಇವರ ಧೇಯವಾಕ್ಯ. ಅದನ್ನೇ ಇಡೀ ಜೀವನ ಪರ್ಯಂತ ಉಸಿರಾಗಿಸಿಕೊಂಡಿರುವ ಇವರು ವರ್ಷದ ಹನ್ನೆರಡು ತಿಂಗಳೂ ಒಂದಿಲ್ಲೊಂದು ಸಮಾಜಸೇವೆಯ ಕೈಂಕರ್ಯದಲ್ಲಿ ತೊಡಗಿರುತ್ತಾರೆ. ಅಂತಹ ರಾಮಣ್ಣ ನವರು ಅಕ್ಷಯ ತದಿಗೆಯ ಶುಭ ದಿನದಂದು ನಗರವನ್ನು ಸ್ವಚ್ಛ ವಾಗಿರಿಸುವ ಪೌರಕಾರ್ಮಿಕ ರಿಗೆ ಅನ್ನ ನೀಡುವ ಪೌರಕಾರ್ಮಿಕರೊಂದಿಗೆ ಒಂದು ಬೆಳಗು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಬಿಬಿಎಂಪಿ ಆಡಳಿತಾಧಿಕಾರಿಗಳ ಸಂಪರ್ಕಾಧಿಕಾರಿ ಶಂಕರ್ ಎಸ್ ಎನ್, ಲೇಖಕ ಕಲ್ಗುಂಡಿ ನವೀನ್, ವಿನಾಯಕ, ಮೊದಲಾದವರು ಅನ್ನದಾನದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
Kshetra Samachara
05/05/2022 02:54 pm