ಮೊದಲ ಹಾಗೂ ಎರಡನೇ ಡೋಸ್ ಲಸಿಕಾಕರಣ ಪ್ರಮಾಣ 100% ದಾಟಿದ್ದರೂ, ಮೂರನೇ ಡೋಸ್‌ನ ಲಸಿಕಾಕರಣ 17% ರಷ್ಟು ಮಾತ್ರ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಡೋಸ್ ಕೂಡ ಉಚಿತವಾಗಿ ನೀಡಲು ಕ್ರಮ ವಹಿಸಿದ್ದಾರೆ. ಆದರೂ ಈ ಡೋಸ್ ಪಡೆದವರ ಪ್ರಮಾಣ ಕಡಿಮೆ ಇದೆ. ಲಕ್ಷಾಂತರ ಲಸಿಕೆ ಡೋಸ್ ಲಭ್ಯವಿದ್ದರೂ ಜನರು ಮುಂದೆ ಬಾರದಿರುವುದು ಬೇಸರ ತಂದಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು-ವಿಧಾನಸೌಧದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಮೂರನೇ ಡೋಸ್ ನೀಡಲಾಗುತ್ತಿದೆ. ಮೂರನೇ ಡೋಸ್ ಪಡೆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ ಎಂದು ತಿಳಿಸಿದರು.ರಾಜ್ಯದಲ್ಲಿ ಕೋವಿಡ್ ಮೂರನೇ ಡೋಸ್ ಲಸಿಕೆಯನ್ನು 17% ರಷ್ಟು ಮಂದಿ ಮಾತ್ರ ಪಡೆದಿದ್ದಾರೆ.ರಾಜ್ಯದಲ್ಲಿ ಈ ತಿಂಗಳ 10 ರವರೆಗೂ 24 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು 60 ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ.
ಇನ್ನು ಯುವಜನರು ಲಸಿಕೆ ಪಡೆಯುವುದರೊಂದಿಗೆ ತಮ್ಮ ಮನೆಯ ಹಿರಿಯರಿಗೂ ಕೊಡಿಸಬೇಕು ಎಂದು ಸುಧಾಕರ್ ಮನವಿ ಮಾಡಿದ್ದಾರೆ
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ನಿರಾಕರಿಸುವ ಬಗ್ಗೆ ದೂರು ಬಂದಿದೆ. ಇದು ಅಮಾನವೀಯ ನಡೆ. ಇಂತಹ ಪ್ರಕರಣ ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ವಹಿಸಲಾಗುವುದು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯಕ್ಕೆ ದಂಡ ವಿಧಿಸುವ ಪ್ರಸ್ತಾಪ ಇಲ್ಲ. ಪರಿಸ್ಥಿತಿ ನೋಡಿಕೊಂಡು ಮತ್ತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಮಾಸ್ಕ್ ವಿಚಾರದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಎಲ್ಲರೂ ಮಾಸ್ಕ್ ಧರಿಸುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಸ್ತಾಪ ಸರ್ಕಾರ ಮುಂದೆ ಇಲ್ಲ ಎಂದು ಸಲಹೆ ನೀಡಿದರು.
PublicNext
11/08/2022 04:38 pm