ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ನಿರ್ವಹಣೆ ಮಾಡುವ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಹಿತ ಶೇ.15 ರಷ್ಟು ಆರೋಗ್ಯ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢವಾಗಿದೆ! 3ನೇ ಅಲೆಯ ಸೋಂಕು ಉತ್ತುಂಗದ ಹಂತದಲ್ಲಿದ್ದು, ನಿತ್ಯ 20 ಸಾವಿರಕ್ಕೂ ಅಧಿಕ ಕೇಸ್‌ಗಳು ವರದಿಯಾಗುತ್ತಿವೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಪರೀಕ್ಷೆ, ಸೋಂಕಿತರ ಆರೋಗ್ಯ ವಿಚಾರಣೆ, ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪತ್ತೆ, ಕ್ವಾರಂಟೈನ್ ಮತ್ತು ಕಂಟೇನ್ಮೆಂಟ್ ಮಾಡುವುದು, ಆರೈಕೆ ಕೇಂದ್ರದಲ್ಲಿ ಸೋಂಕಿತರ ಸೇವೆ ಹಾಗೂ ಔಷಧ ನೀಡಿಕೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿಗೆ ಸೋಂಕು ಬಾಧಿಸುತ್ತಿದೆ. 198 ವಾರ್ಡ್‌ಗಳಲ್ಲಿ 5 ಸಾವಿರಕ್ಕೂ ಅಧಿಕ ಆರೋಗ್ಯ ಸಿಬ್ಬಂದಿ ಕೋವಿಡ್ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದು, ಶೇ.15 ಸಿಬ್ಬಂದಿಗೆ (ಸುಮಾರು 700 ಮಂದಿ) ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಕಷ್ಟು ಸಿಬ್ಬಂದಿ ನಿಯೋಜನೆ: ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ವೇಳೆ ಸೋಂಕು ನಿಯಂತ್ರಣ ಮತ್ತು ನಿರ್ವಹಣೆ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಎದುರಾಗಿತ್ತು. ಹೀಗಾಗಿ, ವೈದ್ಯರು ಮತ್ತು ಇತರ ಸಹಾಯಕ ಸಿಬ್ಬಂದಿ ಸೇರಿ ಶೇ.10 ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸೋಂಕು ನಿರ್ವಹಣೆ ಕಾರ್ಯದಲ್ಲಿ ಸಮಸ್ಯೆ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
PublicNext
28/01/2022 04:36 pm