ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಗನವಾಡಿ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಫ್ರೀಥಿಂಕಿಂಗ್ ಫೌಂಡೇಶನ್ ಸಂಸ್ಥೆಯು ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ "ವಂಡರ್ ಆನ್ ವೀಲ್ಸ್"(ಮನೆ ಬಾಗಿಲಿಗೆ ಶಾಲೆ) ವಾಹನಕ್ಕೆ ಮಾನ್ಯ ಮುಖ್ಯ ಆಯುಕ್ತರಾ ಶ್ರೀ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತರು(ಶಿಕ್ಷಣ) ಡಾ. ರಾಮ್ ಪ್ರಸಾತ್ ಮನೋಹರ್ ರವರು ಚಾಲನೆ ನೀಡಿದರು.
ಬಿಬಿಎಂಪಿ ವತಿಯಿಂದ ಈಗಾಗಲೇ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ 10 ಬಸ್ಸುಗಳಲ್ಲಿ ಸ್ಕೂಲ್ ಆನ್ ವೀಲ್(ಮನೆ ಬಾಗಿಲಿಗೆ ಶಾಲೆ) ವಾಹನಗಳ ಮೂಲಕ ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ.
ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆ ಮತ್ತು ಬಿಬಿಎಂಪಿಯ ಸಹಭಾಗಿತ್ವದಲ್ಲಿ ವಿಶ್ವದ ಮೊದಲ ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್ ಅನ್ನು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮೊದಲ ಮಾಂಟೆಸ್ಸರಿ ವೀಲ್ಸ್ ಶಾಲೆಯನ್ನು ಮೇ 25, 2022 ರಂದು ಪ್ರಾರಂಭಿಸಲಾಯಿತು. ಮಕ್ಕಳಿಗೆ ಮಾಂಟೆಸ್ಸರಿ ವಿಧಾನದಲ್ಲಿ ಬೋಧನೆ ಮಾಡಲು ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ. ಇದರ ಉದ್ದೇಶ ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ 2.5 ರಿಂದ 6 ವರ್ಷ ವಯಸ್ಸಿನ ಅಂಚಿನಲ್ಲಿರುವ ಮಕ್ಕಳ ಆರಂಭಿಕ ಕಲಿಕೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ.
ಇದೀಗ ಫ್ರೀಥಿಂಕಿಂಗ್ ಫೌಂಡೇಶನ್ ಸಂಸ್ಥೆಯು ಬಿಬಿಎಂಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ "ವಂಡರ್ ಆನ್ ವೀಲ್ಸ್" ಮೂಲಕ ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಅಂಗನವಾಡಿಯ ಮಕ್ಕಳಿಗೆ ಆರಂಭಿಕ ಕಲಿಕೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.
ಶಾಲಾ ಶಿಕ್ಷಣವು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯದೆ, ಮಕ್ಕಳು ಹತ್ತಿರದ ಉದ್ಯಾನವನದಲ್ಲಿ ಪ್ರಕೃತಿಯನ್ನು ಅನ್ವೇಷಿಸುವಂತೆ ಬಸ್ಸಿನಲ್ಲಿ ವಿದ್ಯಾಭ್ಯಾಸ ಮಾಡಲು ಆಯ್ಕೆಮಾಡಿಕೊಳ್ಳಲಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಪಾಲಿಕೆ ವತಿಯಿಂದ ಬಸ್ಸುಗಳನ್ನು ಒದಗಿಸಿದ್ದು, ಪ್ರತಿಯೊಂದು ಬಸ್ಸಿನಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿರುತ್ತದೆ. ಅಂಗನವಾಡಿಯ ಮಕ್ಕಳಿಗೆ ವಿನೂತನ ಕಲಿಕಾ ಸಾಮಗ್ರಿ, ಸಂಸ್ಥೆಯಿಂದ ನುರಿತ ಶಿಕ್ಷಕರು ಹಾಗೂ ವಿಭಿನ್ನ ವಾತಾವರಣವನ್ನು ಕಲ್ಪಿಸಿ ಅಂಗನವಾಡಿ ಮಕ್ಕಳ ಅಮೂಲಾಗ್ರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಕಾರ್ಯಕ್ರಮದ ಧ್ಯೇಯೋದ್ಧೇಶವಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಹೆಚ್ಚು ಪ್ರದೇಶಗಳಿಗೆ ವಿಸ್ತಿರಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೆ ಬೋಧನೆ ಮಾಡಲು ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ.
ವಾಹನದಲ್ಲಿ ಇಬ್ಬರು ಶಿಕ್ಷಕಿಯರು, ಓರ್ವ ಗ್ರೂಪ್ ಡಿ ನೌಕರ, ಬಿಳಿ ಹಲಗೆ(ವೈಟ್ ಬೋರ್ಡ್), ಮಕ್ಕಳ ಸ್ನೇಹಿ ಚಿತ್ರಗಳ ಅಳವಡಿಕೆ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳು ಇರಲಿವೆ.
ಈ ವೇಳೆ ಪಾಲಿಕೆ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತರಾದ ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾದ ಉಷಾ, ಫ್ರೀಥಿಂಕಿಂಗ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಸುನೋಜ್ ಫಿಲಿಫ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
12/09/2022 08:10 pm