ಆರ್ಥಿಕ ನಷ್ಟದಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ನಿಗಮಗಳ ಉಳಿವಿಗೆ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಾರಿಗೆ ಬಸ್‌ಗಳಿಗೆ ಬಳಸುವ ಡೀಸೆಲ್ ಮೇಲಿನ ರಾಜ್ಯದ ಪಾಲಿನ ತೆರಿಗೆ ಬಿಟ್ಟುಕೊಡುವ ಪ್ರಸ್ತಾಪ ಮಾಡಿದ್ದಾರೆ. ಜತೆಗೆ ನಿಗಮಗಳ ಜಾಗಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ (ಕಲ್ಯಾಣ) ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಪ್ರತಿದಿನ 13 ಲಕ್ಷ ಲೀಟರ್ ಡೀಸೆಲ್ ಖರೀದಿಸಲು 11.44 ಕೋಟಿ ರೂ. ವೆಚ್ಚ ಮಾಡುತ್ತಿವೆ. ತೆರಿಗೆ ವಿನಾಯಿತಿಯಿಂದ 1.56 ಕೋಟಿ ರೂ. ಉಳಿತಾಯವಾಗಲಿದೆ. ನಿಗಮಗಳು ನಷ್ಟದಿಂದ ಚೇತರಿಸಿಕೊಂಡು ಸುಸ್ಥಿತಿಗೆ ಮರಳುವ ತನಕ ತೆರಿಗೆ ವಿನಾಯಿತಿಗೆ ಚಿಂತನೆ ನಡೆದಿದೆ.
ನಿಗಮಗಳು ಸಗಟು ದರದಲ್ಲಿ ಲೀಟರ್‌ಗೆ 120.26 ರೂ. ಹಾಗೂ ಚಿಲ್ಲರೆ ದರದಲ್ಲಿ 87.68 ರೂ.ನಂತೆ ಡೀಸೆಲ್ ಖರೀದಿಸುತ್ತಿವೆ. ನಿಗಮಗಳಿಗೆ ಡೀಸೆಲ್ ಪೂರೈಕೆ ಗುತ್ತಿಗೆಯನ್ನು ಎಚ್‌ಪಿಸಿಎಲ್ ವಹಿಸಿಕೊಂಡಿದೆ. ಈಗ ಸರಕಾರ ತೆರಿಗೆ ಪಾಲನ್ನು ಯಾವ ವಿಧಾನದಲ್ಲಿ ಬಿಟ್ಟುಕೊಡಬೇಕು ಎಂಬ ಚರ್ಚೆ ನಡೆಸಿದೆ. ಡೀಸೆಲ್ ಖರೀದಿ ಆಧರಿಸಿ ನಿಗದಿತವಾಗಿ ವಾಣಿಜ್ಯ ತೆರಿಗೆ ಇಲಾಖೆ ಮೂಲಕ ಮರುಪಾವತಿ ಮಾಡುವುದು ಸೂಕ್ತವೋ ಅಥವಾ ಖರೀದಿ ಹಂತದಲ್ಲೇ ತೆರಿಗೆ ಪಾಲು ಕಡಿತ ಮಾಡುವುದು ಸರಿಯೋ ಎಂಬ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಪಬ್ಲಿಕ್ ನೆಕ್ಷ್ಟ್ ಗೆ ಸಾರಿಗೆ ನಿಗಮಗಳ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
PublicNext
01/07/2022 04:01 pm