75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಸಂಬಂಧ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊ ಮ್ಮಾಯಿ ಅವರು ಭಾಗಿಯಾಗಲಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೂ ಪ್ರವೇಶ ನೀಡಲಾಗುತ್ತಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯದ ಅಮೃತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ 8:55 ಕ್ಕೆ ಅಗಮಿಸಲಿದ್ದಾರೆ. 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ನಂತರ 12ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾರ್ವಜನಿಕರಿಗೂ ವ್ಯವಸ್ಥೆ ಮಾಡಲಾಗುತ್ತಿದ್ದು, ಎಂಟು ಸಾವಿರ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ. ಒಂದು ಭಾಗದಿಂದ ಪ್ರವೇಶ ನೀಡಲಾಗುತ್ತದೆ.
ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಆಗಸ್ಟ್ 15ರಂದು ನಗರದ ಹಲವೆಡೆ ಸ್ವಾತಂತ್ರ್ಯ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುವ ಹಿನ್ನೆಲೆ ಕೊಂಚಮಟ್ಟಿಗೆ ಟ್ರಾಫಿಕ್ ಸಮಸ್ಯೆ ಆಗಬಹುದು. ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.
ಎರಡು ವರ್ಷಗಳ ನಂತರ ಸಾರ್ವಜನಿರಿಗೆ ಕಾರ್ಯಕ್ರಮದ ಆಮಂತ್ರಣ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 1,700 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ. ಭದ್ರತಾ ಕಾರ್ಯದಲ್ಲಿ ಒಂಬತ್ತು ಡಿಸಿಪಿ, 15 ಎಸಿಪಿ, 44 ಮಂದಿ ಇನ್ಸ್ಪೆಕ್ಟರ್ಗಳು, 96 ಪಿಎಸ್ಐ, 14 ಮಹಿಳಾ ಪಿಎಸ್ಐ, 77 ಮಂದಿ ಎಎಸ್ಐ ಮತ್ತು 800 ಸಿಬ್ಬಂದಿಗಳು, 10 ಕೆಎಸ್ಆರ್ಪಿ ತುಕಡಿಗಳು ತೊಡಗಿಕೊಳ್ಳಲಿವೆ. ಇದರ ಜೊತೆಗೆ ಸನೂರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ವಿವಾದಿತ ಸ್ಥಳ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲೂ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಲಾಗಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲಾಗುತ್ತಿರುವ ಹಿನ್ನೆಲೆ ಭದ್ರತೆ ನೀಡಲಾಗುತ್ತದೆ. ಅಗತ್ಯ ಇದ್ದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗುತ್ತದೆ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆ.15ರಂದು ಸೇನೆಯಿಂದ ವಿಶೇಷ ಪ್ಯಾರಚೂಟ್ ಪ್ರದರ್ಶನ ನಡೆಯಲಿದೆ.
PublicNext
13/08/2022 05:28 pm