ಬೆಂಗಳೂರು: ಪ್ರತಿಷ್ಠಿತ ತೆಲುಗು ವೆಬ್‌ಸೈಟ್ ಸಂಸ್ಥೆ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಮ್ಯಾನ್ ಆಫ್ ಹ್ಯೂಮ್ಯಾನಿಟಿ ಪ್ರಶಸ್ತಿ ಸ್ಥಾಪಿಸಿದ್ದು, ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ತಮಿಳು ನಟ ಆರ್ಯ ಅವರಿಗೆ ಪ್ರದಾನ ಮಾಡಲಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರಿಂದ ಆರ್ಯ ಪ್ರಶಸ್ತಿ ಸ್ವೀಕರಿಸಿದರು. ಪುನೀತ್ ಅವರ ಅಗಲಿಕೆಯ ನಂತರ ಇದೇ ಮೊದಲ ಬಾರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಿನಿಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜತೆಗೆ ‘ಯುವರತ್ನ’ ಚಿತ್ರದಲ್ಲಿನ ನಟನೆಗಾಗಿ ಪುನೀತ್‌ಪರವಾಗಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಆರ್ಯ, ‘ಪುನೀತ್ ರಾಜ್‌ಕುಮಾರ್ ಎಷ್ಟು ಒಳ್ಳೆಯವರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಒಮ್ಮೆ ನಾನು ಅವರ ಮನೆಗೆ ಹೋಗಿದ್ದೆ. ಅಂದು ಭಾನುವಾರ ಆಗಿದ್ದರಿಂದ ಕೆಲಸದವರು ಯಾರೂ ಇರಲಿಲ್ಲ. ಅಪ್ಪು ಅವರೇ ಅಡುಗೆ ಮಾಡಿ ನನಗೆ ಬಡಿಸಿದರು. ತುಂಬಾ ಸರಳವಾಗಿ ಇದ್ದ ಗ್ರೇಟ್ ವ್ಯಕ್ತಿ. ಅವರನ್ನು ಕಳೆದುಕೊಂಡಿದ್ದು ತುಂಬಾ ನಷ್ಟವಾಗಿದೆ. ಅವರ ಹೆಸರಿನಲ್ಲಿ ಸ್ಥಾಪಿಸಿರುವ ಮ್ಯಾನ್ ಆಫ್ ಹ್ಯೂಮ್ಯಾನಿಟಿ ಪ್ರಶಸ್ತಿಯನ್ನು ಮೊದಲು ನಾನು ಸ್ವೀಕರಿಸುತ್ತಿದ್ದೇನೆ’ ಎಂದು ಭಾವುಕರಾದರು. ಗಲಾಟ ಡಾಟ್ ಕಾಂ ಸಂಸ್ಥೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಿದೆ.
Kshetra Samachara
21/07/2022 05:05 pm