ಯಲಹಂಕ: ಕೊರೊನಾದಿಂದಾಗಿ 2 ವರ್ಷ ಶೈಕ್ಷಣಿಕ ಚಟುವಟಿಕೆ ಕುಂಠಿತವಾಗಿತ್ತು. ಇದೀಗ ರಾಜ್ಯ ಸರ್ಕಾರ ವಾಡಿಕೆಗಿಂತ 15 ದಿನ ಮೊದಲೆ ಶಾಲೆ ಆರಂಭಿಸಿದೆ. ಮಕ್ಕಳ ಸ್ವಾಗತಕ್ಕೆ ವಿನೂತನವಾಗಿ "ಕಲಿಕಾ ಚೇತರಿಕೆ ವರ್ಷ" 2022-23 ಶೀರ್ಷಿಕೆಯಡಿ ಇಂದು ಶಿಕ್ಷಣ ಇಲಾಖೆ ಯಲಹಂಕದಲ್ಲಿ ಮಕ್ಕಳಿಗೆ ಡೊಳ್ಳು- ಕಂಸಾಳೆ ಪ್ರದರ್ಶನ ಮೂಲಕ ಶಾಲೆಗೆ ಭರ್ಜರಿಯಾಗಿ ಸ್ವಾಗತಿಸಿತು. ರೋಸ್ ಹೂ- ಚಾಕೊಲೇಟ್ ಪಡೆದ ಮಕ್ಕಳು-ಶಿಕ್ಷಕರು ಡೊಳ್ಳು- ಕಂಸಾಳೆ ನಿನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಯಲಹಂಕದ ವಿಶ್ವಭಾರತಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕೇಂದ್ರ ಕಂಸಾಳೆ- ಡೊಳ್ಳು ಕುಣಿತದ ವ್ಯವಸ್ಥೆ ಮಾಡಿತ್ತು. ಕಳೆದೆರಡು ವರ್ಷಗಳಿಂದ ಶಾಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ವಂಚಿತರಾಗಿದ್ದ ಕಿರಿ- ಹಿರಿಯ ಪ್ರಾಥಮಿಕ ಶಾಲೆಗಳ ನೂರಾರು ಮಕ್ಕಳನ್ನು ಇಂದು ಯಲಹಂಕ ವಾರ್ಡ್ ಒಂದರ ಕಚೇರಿಯಿಂದ ಡೊಳ್ಳು- ಕಂಸಾಳೆ ಮೂಲಕ ಬಂಗಲೆ ಶಾಲೆವರೆಗೂ ಮೆರವಣಿಗೆಯಿಂದ ಕರೆತರಲಾಯ್ತು.
ಈ ವೇಳೆ ಡೊಳ್ಳು- ಕಂಸಾಳೆ ಸದ್ದಿನ ನೃತ್ಯ ನೆರೆದಿದ್ದ ನೂರಾರು ಜನರನ್ನು ರಂಜಿಸಿತು. ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಸೌಲಭ್ಯ ಪಡೆಯಬೇಕು. ಆದ್ದರಿಂದ ಈ ಮೂಲಕ ಮಕ್ಕಳನ್ನು ವಿನೂತನವಾಗಿ ಮತ್ತೆ ಸರ್ಕಾರಿ ಶಾಲೆಗಳಿಗೆ ಬರುವಂತೆ ಮಾಡ್ತಿರುವುದು ಖುಷಿಯ ವಿಚಾರ ಅಂತಾರೆ ಸ್ಥಳೀಯರು.
ಎಲ್ಲಿಯ ಸರ್ಕಾರಿ ಶಾಲೆ? ಎಲ್ಲಿಯ ಡೊಳ್ಳು- ಕಂಸಾಳೆ ಸಂಭ್ರಮ? ಖಾಸಗಿ ಶಾಲೆಗಳ ಧನದಾಹಕ್ಕೆ ಬ್ರೇಕ್ ಹಾಕಲು ಜನರೇ ತೀರ್ಮಾನಿಸಿದಂತಿತ್ತು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದರೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವುದರಲ್ಲಿ ಡೌಟೇ ಇಲ್ಲ! ಅಲ್ಲವೇ?
Kshetra Samachara
17/05/2022 08:21 am